ಆಸ್ಟ್ರೇಲಿಯದಲ್ಲಿ ನಾನು ತೆಗೆದುಕೊಂಡ ನಿರ್ಧಾರದ ಶ್ರೇಯಸ್ಸನ್ನು ಬೇರೆಯವರು ಪಡೆದರು: ಅಜಿಂಕ್ಯ ರಹಾನೆ

ಹೊಸದಿಲ್ಲಿ, ಫೆ.10: ‘‘ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ತಂಡವು ಕೇವಲ 36 ರನ್ಗೆ ಆಲೌಟ್ ಆದ ಬಳಿಕ ನಾನು ತೆಗೆದುಕೊಂಡ ನಿರ್ಧಾರದ ಶ್ರೇಯಸ್ಸನ್ನು ಬೇರೆಯವರು ಪಡೆದುಕೊಂಡರು’’ ಎಂದು 2020-21ರ ಆಸ್ಟ್ರೇಲಿಯ ಪ್ರವಾಸದಲ್ಲಿ ಭಾರತದ ಐತಿಹಾಸಿಕ ಗೆಲುವಿನ ಕೇಂದ್ರಬಿಂದುವಾಗಿದ್ದ ಆಗಿನ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.
ಅಡಿಲೇಡ್ನಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ಅವಮಾನಕಾರಿ ಸೋಲಿನ ಬಳಿಕ ಖಾಯಂ ನಾಯಕ ವಿರಾಟ್ಕೊಹ್ಲಿ ಆಸ್ಟ್ರೇಲಿಯದಿಂದ ನಿರ್ಗಮಿಸಿದ್ದರು. ಅಂತಹ ಕಷ್ಟಕರ ಸನ್ನಿವೇಶದಲ್ಲಿ ರಹಾನೆ ತಂಡದ ನಾಯಕತ್ವವಹಿಸಿದ್ದರು. ಭಾರತವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ 2ನೇ ಟೆಸ್ಟ್ ಪಂದ್ಯವನ್ನು 8 ವಿಕೆಟ್ಗಳಿಂದ ಗೆದ್ದುಕೊಂಡಿತು. ರಹಾನೆ ಶತಕ ಗಳಿಸುವ ಮೂಲಕ ತಂಡದ ಪ್ರತಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
‘‘ನಾನು ಅಲ್ಲಿ ಏನು ಮಾಡಿದ್ದೇನೆ ಎಂದು ನನಗೆ ತಿಳಿದಿದೆ. ನಾನು ಯಾರಿಗೂ ಹೇಳುವ ಅಗತ್ಯವಿಲ್ಲ. ಶ್ರೇಯಸ್ಸು ಪಡೆದುಕೊಳ್ಳುವ ಸ್ವಭಾವ ನನ್ನದಲ್ಲ. ಹೌದು ನಾನು ಮೈದಾನದಲ್ಲಿ ಅಥವಾ ಡ್ರೆಸ್ಸಿಂಗ್ ರೂಮ್ನಲ್ಲಿ ಕೆಲವು ವಿಷಯಗಳಿಗೆ ಸಂಬಂಧಿಸಿ ನಿರ್ಧಾರ ತೆಗೆದುಕೊಂಡಿದ್ದೆ. ಆದರೆ ಅದರ ಕ್ರೆಡಿಟ್ನ್ನು ಬೇರೊಬ್ಬರು ತೆಗೆದುಕೊಂಡರು’’ ಎಂದು ‘ಬ್ಯಾಕ್ಸ್ಟೇಜ್ ವಿತ್ ಬೋರಿಯಾ’ ಸಂಚಿಕೆಯಲ್ಲಿ ರಹಾನೆ ಹೇಳಿದರು.
‘‘ನಾವು ಸರಣಿ ಗೆದ್ದಿದ್ದೇವೆ ಎನ್ನುವುದು ನನಗೆ ಮುಖ್ಯವಾಗಿತ್ತು. ಅದೊಂದು ಐತಿಹಾಸಿಕ ಸರಣಿಯಾಗಿತ್ತು. ನನಗೆ ಅದು ನಿಜವಾಗಿಯೂ ವಿಶೇಷವಾಗಿತ್ತು’’ ಎಂದು ಮುಂಬೈ ಬ್ಯಾಟರ್ ರಹಾನೆ ಹೇಳಿದರು. ರಹಾನೆ ತನ್ನ ಹೇಳಿಕೆಯಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ. ಆದರೆ ಅವರ ಈ ಹೇಳಿಕೆಯು ಆಗಿನ ಮುಖ್ಯ ಕೋಚ್ ರವಿ ಶಾಸ್ತ್ರಿ ಮೇಲಿನ ಮುಸುಕಿನ ಗುದ್ದಾಟವಾಗಿದೆ ಎನ್ನಲಾಗಿದೆ. ಆಸ್ಟ್ರೇಲಿಯದಲ್ಲಿ ತಂಡದ ಅತ್ಯುತ್ತಮ ಸಾಧನೆಗೆ ರವಿ ಶಾಸ್ತ್ರಿ ಮಾಧ್ಯಮಗಳಲ್ಲಿ ಮೆಚ್ಚುಗೆ ಪಡೆದಿದ್ದರು.