ಹೈಕೋರ್ಟ್ ಆದೇಶದ ಕುರಿತು ಸಿಎಂ ಗೊಂದಲದ ಹೇಳಿಕೆ; ಕಾಲೇಜಿಗೆ ಬಂದು ಮತ್ತೆ ವಾಪಾಸ್ಸಾದ ವಿದ್ಯಾರ್ಥಿನಿಯರು!

ಉಡುಪಿ, ಫೆ.17: ಹಿಜಾಬ್ ಕುರಿತ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿನ ಗೊಂದಲದ ಮತ್ತು ಪದವಿ ಕಾಲೇಜುಗಳಿಗೆ ಆದೇಶ ಅನ್ವಯ ಆಗುವುದಿಲ್ಲ ಎಂಬ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರ ಹೇಳಿಕೆ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ಕಲ್ಪಿಸುವಂತೆ ಉಡುಪಿ ಅಜ್ಜರಕಾಡು ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಗುರುವಾರ ಪ್ರಾಂಶುಪಾಲರಲ್ಲಿ ಮನವಿ ಮಾಡಿದರು. ಆದರೆ ಅವಕಾಶ ನಿರಾಕರಿಸಿದ ಹಿನ್ನೆಲೆ ಯಲ್ಲಿ ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿನಿಯರು ಮನೆಗೆ ವಾಪಾಸ್ಸಾದರು.
ಬುಧವಾರ ಹಿಜಾಬ್ ಧರಿಸಿ ಬಂದ ಕಾರಣಕ್ಕೆ ತರಗತಿ ಪ್ರವೇಶ ಇಲ್ಲದ ಕಾರಣ ಮನೆಗೆ ವಾಪಾಸ್ಸು ತೆರಳಿದ್ದ ವಿದ್ಯಾರ್ಥಿನಿಯರು, ಮುಖ್ಯಮಂತ್ರಿ ಹೇಳಿಕೆ ಹಿನ್ನೆಲೆಯಲ್ಲಿ ಗುರುವಾರ ಮತ್ತೆ ಕಾಲೇಜಿಗೆ ಬಂದರು. ಈ ವಿಚಾರವಾಗಿ ಸುಮಾರು 50 ಅಧಿಕ ವಿದ್ಯಾರ್ಥಿನಿಯರು ಪ್ರಾಂಶುಪಾಲರಲ್ಲಿ ಸಿಎಂ ಹೇಳಿಕೆ ಯನ್ನು ಪ್ರಸ್ತಾಪಿಸಿ ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ಕಲ್ಪಿಸುವಂತೆ ಮನವಿ ಮಾಡಿದರು. ಆದರೆ ಪ್ರಾಂಶುಪಾಲರು ಹೈಕೋರ್ಟ್ ಆದೇಶವನ್ನು ಮುಂದಿಟ್ಟು ಕೊಂಡು ತರಗತಿಗೆ ಪ್ರವೇಶ ನಿರಾಕರಿಸಿದರು. ಇದರಿಂದ ಆ ವಿದ್ಯಾರ್ಥಿನಿಯರು ವಾಪಾಸ್ಸು ಮನೆಗೆ ತೆರಳಿದರು.
ಮತ್ತೆ ಅವಕಾಶ ನಿರಾಕರಣೆ
‘ನಿನ್ನೆ ನಮಗೆ ಸಿಎಂ ಹೇಳಿಕೆ ಬಗ್ಗೆ ಗೊತ್ತಿರಲಿಲ್ಲ. ಹಾಗಾಗಿ ಪ್ರಾಂಶುಪಾಲರ ಮಾತಿನಂತೆ ಮನೆಗೆ ವಾಪಾಸ್ಸು ಹೋಗಿದ್ದೇವೆ. ಇದೀಗ ಇಂದು ಕಾಲೇಜಿಗೆ ಬಂದು ಪ್ರಾಂಶುಪಾಲರಿಗೆ ಮುಖ್ಯಮಂತ್ರಿ ಹೇಳಿಕೆಗೆ ಬಗ್ಗೆ ತಿಳಿಸಿದ್ದೇವೆ. ಅದಕ್ಕೆ ಅವರು ನಮ್ಮ ಕಾಲೇಜು ಅಭಿವೃದ್ಧಿ ಸಮಿತಿ ಅಧೀನದಲ್ಲಿರುವುದರಿಂದ ಇದು ನಮಗೆ ಅನ್ವಯ ಆಗುವುದಿಲ್ಲ ಎಂದು ಹೇಳಿದ್ದಾರೆ. ಯಾರು ಏನೇ ಹೇಳಿದರೂ ನಾವು ಹಿಜಾಬ್ ತೆಗೆಯುವುದಿಲ್ಲ. ಹೈಕೋರ್ಟ್ ಅಂತಿಮ ಆದೇಶ ಬರುವ ವರೆಗೆ ತರಗತಿಗೆ ಹೋಗುವುದಿಲ್ಲ ಎಂದು ವಿದ್ಯಾರ್ಥಿನಿಯೊಬ್ಬರು ತಿಳಿಸಿದರು.
‘ಪದವಿ ಕಾಲೇಜುಗಳಿಗೆ ಹೈಕೋರ್ಟ್ ಆದೇಶ ಅನ್ವಯ ಆಗುವುದಿಲ್ಲ ಎಂದು ಸಿಎಂ ಸದನದಲ್ಲೂ ಹೇಳಿದ್ದಾರೆ. ಆದರೂ ಈ ಕಾಲೇಜಿನವರು ನಮ್ಮ ಮಕ್ಕಳನ್ನು ತರಗತಿಗೆ ಬಿಡುತ್ತಿಲ್ಲ. ಇದರ ಹಿಂದೆ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಶಿಕ್ಷಣ ದಿಂದ ವಂಚಿತರನ್ನಾಗಿಸುವ ಷಡ್ಯಂತರ ನಡೆಯುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಈ ಕಾಲೇಜಿನವರು ಹೈಕೋರ್ಟ್ ಆದೇಶವನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ’ ಎಂದು ವಿದ್ಯಾರ್ಥಿನಿಯ ಪೋಷಕ ಹನೀಫ್ ಕರಂಬಳ್ಳಿ ಆರೋಪಿಸಿದ್ದಾರೆ.
ಆನ್ಲೈನ್ ಪರೀಕ್ಷೆಗೆ ಮನವಿ
‘ಸೋಮವಾರ ನಮಗೆ ಪರೀಕ್ಷೆ ಆರಂಭವಾಗಲಿದೆ. ಆದುದರಿಂದ ಆನ್ಲೈನ್ ತರಗತಿ ಮತ್ತು ಪರೀಕ್ಷೆ ನಡೆಸುವಂತೆ ಪ್ರಾಂಶುಪಾಲರಲ್ಲಿ ಮನವಿ ಮಾಡಿದ್ದೇವೆ. ಅದಕ್ಕೆ ಅವರು ಉಪನ್ಯಾಸಕರೊಂದಿಗೆ ಸಭೆ ನಡೆಸಿ ನಿರ್ಧಾರ ತೆಗೆದು ಕೊಳ್ಳುವು ದಾಗಿ ಹೇಳಿದ್ದಾರೆ’ ಎಂದು ಬಿಕಾಂ ವಿದ್ಯಾರ್ಥಿನಿಯೊಬ್ಬರು ತಿಳಿಸಿದರು.
‘ಪ್ರಾಂಶುಪಾಲರು ಆನ್ಲೈನ್ ಪರೀಕ್ಷೆ ಆಗದಿದ್ದರೆ ಮರು ಪರೀಕ್ಷೆ ಮಾಡು ತ್ತೇವೆ ಎಂದು ಹೇಳಿದ್ದಾರೆ. ಆದರೆ ಮರು ಪರೀಕ್ಷೆ ಮಾಡಿದರೂ ನಾವು ಹಿಜಾಬ್ ತೆಗೆದು ಕುಳಿತುಕೊಳ್ಳುವುದಿಲ್ಲ. ನಮ್ಮ ಕಾಲೇಜಿನಲ್ಲಿ ಯಾವತ್ತೂ ಹಿಜಾಬ್ ಸಮಸ್ಯೆ ಇರಲಿಲ್ಲ. ನಾನು ಮೂರು ವರ್ಷ ಇಲ್ಲೇ ಕಲಿತದ್ದು. ಅದು ಕೂಡ ಹಿಜಾಬ್ ಹಾಕಲು ಅವಕಾಶ ಇದೆ ಎಂದು ಹುಡುಕಿ ಈ ಕಾಲೇಜಿಗೆ ಬಂದು ಸೇರಿದ್ದು. ಇದೀಗ ಕೊನೆಯ ಗಳಿಗೆಯಲ್ಲಿ ಹಿಜಾಬ್ ಹಾಕಬೇಡಿ ಎಂದು ಹೇಳಿದರೆ ಏನು ಮಾಡಬಹುದು. ನಮ್ಮ ಸಹಪಾಠಿಗಳು ನಮಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ನೋಟ್ಸ್ಗಳನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ’ ಎಂದು ಅವರು ತಿಳಿಸಿದರು.
ಸಿಎಂಗೆ ವಿದ್ಯಾರ್ಥಿನಿಯರ ಮನವಿ
ನಾವು ಮಾಧ್ಯಮದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತಿ ದ್ದೇವೆ. ಹೈಕೋರ್ಟ್ ಆದೇಶ ಪದವಿ ಕಾಲೇಜುಗಳಿಗೆ ಅನ್ವಯಿಸುವುದಿಲ್ಲ ಎಂದು ನೀಡಿರುವ ಹೇಳಿಕೆಯನ್ನು ಲಿಖಿತ ರೂಪದಲ್ಲಿ ಹೊರಡಿಸಬೇಕು. ಯಾಕೆಂದರೆ ನಮ್ಮ ಕಾಲೇಜಿನವರು ಹೇಳಿಕೆಗಿಂತ ಲಿಖಿತ ದಾಖಲೆಗೆ ಆದ್ಯತೆ ನೀಡುತ್ತಾರೆ. ಆದುದರಿಂದ ಆದಷ್ಟು ಬೇಗ ಲಿಖಿತವಾಗಿ ಆದೇಶ ನೀಡುವ ಮೂಲಕ ಹಿಜಾಬ್ ಹಾಕಿ ತರಗತಿಯಲ್ಲಿ ಕುಳಿತುಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಅಜ್ಜರಕಾಡು ಮಹಿಳಾ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ.
‘ಮುಖ್ಯಮಂತ್ರಿಗಳ ಹೇಳಿಕೆಯನ್ನು ನಾವು ತಿಳಿದುಕೊಂಡು ಕಾಲೇಜಿಗೆ ಬಂದಿ ದ್ದೇವೆ. ಆದರೆ ಸಿಎಂ ಅವರ ಹೇಳಿಕೆ ಲಿಖಿತವಾಗಿ ಇಲ್ಲದಿರುವುದರಿಂದ ಪ್ರಾಂಶು ಪಾಲರು ಏನು ಮಾಡುವಾಗೆ ಇಲ್ಲ. ಆದುದರಿಂದ ಸಿಎಂ ಹೇಳಿಕೆಯ ಬದಲು ಲಿಖಿತ ಆದೇಶ ಹೊರಡಿಸಲಿ. ನಮಗೆ ಪರೀಕ್ಷೆಗಿಂತ ಮುಖ್ಯಮಂತ್ರಿ ಆದೇಶ ಬಗ್ಗೆ ಚಿಂತೆಯಾಗಿದೆ ಎಂದು ವಿದ್ಯಾರ್ಥಿನಿ ತಿಳಿಸಿದರು.
''ಉಡುಪಿ ಜಿಲ್ಲೆಯಲ್ಲಿ ಪರಿಸ್ಥಿತಿ ಶಾಂತಾವಾಗಿದೆ. ಕೆಲವು ಕಾಲೇಜುಗಳಲ್ಲಿ ಹಿಜಾಬ್ ಹಾಕಿಕೊಂಡು ಬಂದವರಿಗೆ ತರಗತಿಗೆ ಪ್ರವೇಶ ನೀಡಿಲ್ಲ. ಇಷ್ಟ ಇರುವ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ತೆರಳಿದ್ದಾರೆ. ಅಜ್ಜರಕಾಡು ಮಹಿಳಾ ಸರಕಾರಿ ಪದವಿ ಕಾಲೇಜಿನಲ್ಲಿ ಯಾವುದೇ ಬಿಗುವಿನ ವಾತಾವರಣ ನಿರ್ಮಾಣವಾಗಿಲ್ಲ. ವಿದ್ಯಾರ್ಥಿನಿಯರು ಮತ್ತೆ ಇಂದು ಕಾಲೇಜಿಗೆ ಬಂದು ಪ್ರಾಂಶುಪಾಲರಲ್ಲಿ ಮನವಿ ಮಾಡಿದ್ದಾರೆ. ಆದರೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅವರು ಹಿಜಾಬ್ ಹಾಕಿ ತರಗತಿಗೆ ಹೋಗಲು ಅವಕಾಶ ನೀಡಿಲ್ಲ. ಹಾಗಾಗಿ ಸುಮಾರು 35 ವಿದ್ಯಾರ್ಥಿನಿಯರು ವಾಪಾಸ್ಸು ಮನೆಗೆ ಹೋಗಿದ್ದಾರೆ. ಎಲ್ಲ ಶಾಲಾ ಕಾಲೇಜುಗಳಲ್ಲಿ ಭದ್ರತೆ ಮುಂದುವರೆಸಲಾಗಿದೆ.
-ಎಸ್.ಟಿ.ಸಿದ್ದಲಿಂಗಪ್ಪ, ಹೆಚ್ಚುವರಿ ಎಸ್ಪಿ, ಉಡುಪಿ