ಮಣಿಪಾಲ: ಶಾರ್ಟ್ ಸರ್ಕ್ಯೂಟ್‌ನಿಂದ ಖಾಸಗಿ ಬಸ್ ಬೆಂಕಿಗಾಹುತಿ: ಪ್ರಯಾಣಿಕರು ಪಾರು
ಉಡುಪಿ, ಫೆ.23: ಶಾರ್ಟ್ ಸರ್ಕ್ಯೂಟ್‌ನಿಂದ ಖಾಸಗಿ ಬಸ್ಸೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ಮಣಿಪಾಲ ಟೈಗರ್ ಸರ್ಕಲ್ ಬಳಿ ಬುಧವಾರ ಮುಂಜಾನೆ 4.30ರ ಸುಮಾರಿಗೆ ನಡೆದಿದ್ದು, ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಬಳ್ಳಾರಿಯ ಕೊಟ್ಟೂರಿನಿಂದ ಮಂಗಳೂರು ಮಾರ್ಗದ ಸ್ಲೀಪರ್ ಕೋಚ್ ದುರ್ಗಾಂಬ ಬಸ್, ಪ್ರಯಾಣಿಕರನ್ನು ಇಳಿಸಲು ಮಣಿಪಾಲಕ್ಕೆ ಆಗಮಿಸಿತ್ತು. ಟೈಗರ್ ಸರ್ಕಲ್‌ನಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದ ವೇಳೆ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತೆನ್ನಲಾಗಿದೆ. ತಕ್ಷಣವೇ ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು.
ಸ್ಥಳೀಯರು ಕೂಡಲೇ ಬೆಂಕಿ ನಂದಿಸಲು ಪ್ರಯತ್ನಪಟ್ಟರು ಸಫಲರಾಗಿಲ್ಲ. ಬಳಿಕ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ತಂಡ ನಿರಂತರ ಒಂದು ಗಂಟೆಗಳ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಈ ಅವಘಡದಿಂದ ಬಸ್ ಸಂಪೂರ್ಣ ಸುಟ್ಟು ಹೋಗಿದ್ದು, ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.