ತೊಕ್ಕೊಟ್ಟು: ಪ್ರತಿಭಟನೆಯ ಮಧ್ಯೆಯೇ ಬ್ಯಾರಿ ಅಕಾಡಮಿಯ ಕಚೇರಿಗೆ ಶಿಲಾನ್ಯಾಸ
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಗೈರು

ಮಂಗಳೂರು, ಫೆ.26: ಉಳ್ಳಾಲದ ಬಿಜೆಪಿಗರು, ಸಂಘ ಪರಿವಾರದ ಕಾರ್ಯಕರ್ತರು ಹಾಗೂ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸದಸ್ಯರ ಭಾರೀ ವಿರೋಧ ಮತ್ತು ಪ್ರತಿಭಟನೆಯ ಮಧ್ಯೆಯೇ ಶನಿವಾರ ತೊಕ್ಕೊಟ್ಟಿನಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ನೂತನ ಕಚೇರಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ.
ಶಿಲಾನ್ಯಾಸ ನೆರವೇರಿಸಬೇಕಿದ್ದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್‌ರ ಗೈರು ಹಾಜರಿಯಲ್ಲಿ ರಾಜ್ಯ ವಿಪಕ್ಷ ಉಪ ನಾಯಕ ಹಾಗೂ ಸ್ಥಳೀಯ ಶಾಸಕ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು.
ಕಳೆದ ವರ್ಷ ಕಚೇರಿಯ ನಿರ್ಮಾಣಕ್ಕೆ ಅಬ್ಬಕ್ಕ ಉತ್ಸವ ಸಮಿತಿಯಿಂದ ಪ್ರತಿಭಟನೆ ವ್ಯಕ್ತವಾಗಿತ್ತು. ಹಾಗಾಗಿ ಶಿಲಾನ್ಯಾಸ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಬಳಿಕ ಸಚಿವರು, ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಅಲ್ಲದೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ತದನಂತರ ಕೆಲವು ಮಂದಿ ಕಾಮಗಾರಿಗೆ ಅಡ್ಡಿಪಡಿಸಿದ ಕಾರಣ ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಲಾಗಿತ್ತು.
ಶನಿವಾರ ಮತ್ತೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದ್ದಾಗಲೇ ಬಿಜೆಪಿ ಮುಖಂಡರು, ಸಂಘ ಪರಿವಾರದ ಕಾರ್ಯಕರ್ತರು, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವರಿ ಸಚಿವರ ಸಹಿತ ಜಿಲ್ಲೆಯ ಇತರ ಸಚಿವರು, ಸಂಸದರು ಗೈರಾಗಿದ್ದರು. ಶಾಸಕ ಯು.ಟಿ.ಖಾದರ್ ಕಾರ್ಯಕ್ರಮಕ್ಕೆ ಆಗಮಿಸಿದಾಗ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಮುತ್ತಿಗೆ ಹಾಕಿದರು.
ಈ ಸಂದರ್ಭ ದಿ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ, ಬ್ಯಾರಿ ಭವನ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ, ಆದರೆ ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ ನಮಗೆ ದೇವರಿದ್ದಂತೆ. ಅಬ್ಬಕ್ಕ ಭವನ ಇದುವರೆಗೆ ಯಾಕೆ ಆಗಿಲ್ಲ. ಎಲ್ಲೋ ಆಗಬೇಕಾದ ಬ್ಯಾರಿ ಭವನ ಇಲ್ಲಿಗೇಕೆ ಎಂದು ಪ್ರಶ್ನಿಸಿದರು.
ಶಾಸಕ ಯು.ಟಿ.ಖಾದರ್ ಮಾತನಾಡಿ, ಸದಾನಂದ ಗೌಡ ಮುಖ್ಯಮಂತ್ರಿ ಆಗಿದ್ದಾಗ 2 ಕೋ.ರೂ.ಅನುದಾನ ಕೊಟ್ಟಿದ್ದರು. ಬಳಿಕ 4 ಕೋ.ರೂ.ಗೆ ಅದನ್ನು ಏರಿಸಲಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 8 ಕೋ.ರೂ.ಅನುದಾನವನ್ನು ನಾನೇ ಬಿಡುಗಡೆ ಮಾಡಿಸಿದ್ದೆ. ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಹೌಸಿಂಗ್ ಬೋರ್ಡ್ ನಡುವಿನ ಹೊಂದಾಣಿಕೆ ಕೊರತೆಯಿಂದ ಕಾಮಗಾರಿ ತಡವಾಗಿದೆ. ಜಿಲ್ಲಾಧಿಕಾರಿ ಜೊತೆ ಚರ್ಚೆ ಮಾಡಿದಾಗ ಆರು ತಿಂಗಳಲ್ಲಿ ಆರಂಭಿಸುವ ಬಗ್ಗೆ ನೀಡಿದ್ದ ಭರವಸೆ ಪತ್ರವೂ ಇದೆ. ಅದರೂ ಕಾಮಗಾರಿ ಆಗದ ಬಗ್ಗೆ ವಿದಾನಸಭೆಯ ಭರವಸೆ ಸಮಿತಿಗೆ ಕಳಿಸಿ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.
ಬ್ಯಾರಿ ಅಕಾಡಮಿಯಲ್ಲಿ ಎಲ್ಲಾ ಧರ್ಮೀಯರಿದ್ದಾರೆ. ಬ್ಯಾರಿ ಭವನವನ್ನು ನೀರುಮಾರ್ಗ ಸಮೀಪದ ಬೈತುರ್ಲಿಯಿಂದ ವರ್ಗಾಯಿಸುವಂತೆ ಅಲ್ಲಿನ ಶಾಸಕರು, ರಹೀಂ ಉಚ್ಚಿಲ್ ಬಳಿ ಮಾತುಕತೆ ನಡೆಸಿದ್ದರು. ಬಳಿಕ ಅಂದಿನ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್ ಅವರು ಶಾಸಕ ಡಾ.ಭರತ್ ಶೆಟ್ಟಿಯಿಂದ ಮನವಿ ಸ್ವೀಕರಿಸಿ ತಹಶೀಲ್ದಾರ್ ಜೊತೆ ಮುಡಾ ಕಚೇರಿಯಲ್ಲಿ ಸಭೆ ನಡೆಸಿದ್ದರು. ಆದರೆ ಅದರ ಬಗ್ಗೆಯಾಗಲೀ, ಜಾಗದ ಬಗ್ಗೆಯಾಗಲೀ ನನಗೆ ಮಾಹಿತಿ ನೀಡದೆ ಅವರೇ ತೀರ್ಮಾನ ಮಾಡಿದ್ದಾರೆ ಎಂದು ಖಾದರ್ ಹೇಳಿದರು.
ನೀವು ಶಾಸಕರಾಗಿದ್ದಾಗ ನಿಮ್ಮನ್ನೇಕೆ ಕರೆದಿಲ್ಲ, ನೀವೂ ಜವಾಬ್ದಾರರು. ನೀವು ನಿಷ್ಕ್ರೀಯರಾದಂತೆ ಎನ್ನುವುದನ್ನು ಒಪ್ಪಿಕೊಳ್ಳಿ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಯು.ಟಿ. ಖಾದರ್, ಸರಕಾರಿ ಇಲಾಖೆಯ ಗುಮಾಸ್ತ, ಸಿಬ್ಬಂದಿ, ಅಧಿಕಾರಿಗಳ ವರ್ಗಾವಣೆಯ ಸಂದರ್ಭ ಬಿಜೆಪಿ ಅಧ್ಯಕ್ಷರ ಪತ್ರ ನಡೆಯುತ್ತದೆ. ಉಸ್ತುವಾರಿ ಸಚಿವರ ಹಿಂದೆ ಮುಂದೆ ನೀವೇ ಇದ್ದೀರಿ. ಅಕಾಡಮಿಯ ಕಚೇರಿ ಜಾಗದ ವಿಚಾರದಲ್ಲಿ ನೀವೇಕೆ ಸುಮ್ಮನಿದ್ದೀರಿ? ಈಗ ಮಾತ್ರ ನಾನು ಹೊಣೆ ಹೊರಬೇಕಾ? ಸರಕಾರವೇ ಒಪ್ಪಿಗೆ ನೀಡಿದ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ನನ್ನ ಜವಾಬ್ದಾರಿ. ಉಸ್ತುವಾರಿ ಸಚಿವರು ಮನಸ್ಸು ಮಾಡಿದ್ದರೆ ಕೇವಲ ಒಂದು ಕರೆ ಮಾಡಿ ಈ ಕಾರ್ಯಕ್ರಮವನ್ನು ನಿಲ್ಲಿಸಬಹುದಿತ್ತು. ಆದರೆ ಅವರು ಆ ಕೆಲಸ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಅಲೆಮಾರಿ-ಅರೆಅಲೆಮಾರಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್, ಮಾಜಿ ಶಾಸಕ ಜಯರಾಮ ಶೆಟ್ಟಿ, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಧನಲಕ್ಷ್ಮಿ ಗಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ಉಪಾಧ್ಯಕ್ಷ ಯಶವಂತ್ ಅಮೀನ್ ಮತ್ತಿತರರು ಪ್ರತಿಭಟನೆಗೆ ನೇತೃತ್ವ ನೀಡಿದ್ದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ರಮದ ಪಟ್ಟಿಯಲ್ಲಿ ಕೊಂಕಣಿ ಭವನಕ್ಕೆ ಶಿಲಾನ್ಯಾಸದ ಬಗ್ಗೆ ಉಲ್ಲೇಖಿಸಲಾಗಿತ್ತು. ಆದರೆ ಬ್ಯಾರಿ ಅಕಾಡಮಿಯ ಶಿಲಾನ್ಯಾಸದ ಬಗ್ಗೆ ಉಲ್ಲೇಖವಿರಲಿಲ್ಲ. ಸಚಿವರು ಮಂಗಳೂರಿನಲ್ಲೇ ಇದ್ದರೂ ಕೂಡ ತನ್ನದೇ ಇಲಾಖೆಯ ಅಧೀನದ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾದಾಗ ಮೌನ ತಾಳಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ಪ್ರತಿಭಟನೆ ನಡುವೆಯೇ ನೂತನ ಕಚೇರಿಗೆ ಶಿಲಾನ್ಯಾಸ!
ಅತ್ತ ಪ್ರತಿಭಟನೆ ನಡೆಯುತ್ತಿದ್ದರೆ, ಇತ್ತ ಶಿಲಾನ್ಯಾಸದ ಸಭಾ ಕಾರ್ಯಕ್ರಮ ಆರಂಭಿಸಲಾಯಿತು. ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ಕೊಂಕಣಿ ಅಕಾಡಮಿಯ ಅಧ್ಯಕ್ಷ ಡಾ.ಕೆ.ಜಗದೀಶ್ ಪೈ ಸಹಿತ ಗಣ್ಯರ ಸಮ್ಮುಖದಲ್ಲಿ ಶಾಸಕ ಯು.ಟಿ. ಖಾದರ್ ಶಿಲಾಫಲಕ ಅನಾವರಣಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭ ಉಳ್ಳಾಲ ನಗರ ಸಭೆಯ ಅಧ್ಯಕ್ಷ ಚಿತ್ರ ಕಲಾ, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಝರೀನ ರವೂಫ್, ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ, ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ.ಅಬೂಬಕ್ಕರ್ ಸಿದ್ದೀಕ್, ಅಧ್ಯಯನ ಪೀಠದ ಸದಸ್ಯರಾದ ಅಹ್ಮದ್ ಬಾವಾ ಪಡೀಲ್, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಸಂಶುದ್ದೀನ್ ಮಡಿಕೇರಿ, ಬ್ಯಾರಿ ಸಾಹಿತ್ಯ ಅಕಾಡಮಿಯ ನಿಕಟಪೂರ್ವ ರಿಜಿಸ್ಟ್ರಾರ್ ಪೂರ್ಣಿಮಾ, ಹಾಲಿ ರಿಜಿಸ್ಟ್ರಾರ್ ಮನೋಹರ್ ಕಾಮತ್, ಸಾಮಾಜಿಕ ಮುಖಂಡ ಅಬ್ಬಾಸ್ ಉಚ್ಚಿಲ್, ಗುತ್ತಿಗೆದಾರ ಪ್ರಭಾಕರ ಯೆಯ್ಯಾಡಿ, ಅಕಾಡಮಿಯ ಸದಸ್ಯ ರಾಧಾಕೃಷ್ಣ ನಾವಡ ಮತ್ತಿತರರು ಉಪಸ್ಥಿತರಿದ್ದರು.
ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ನಝೀರ್ ಪೊಲ್ಯ ವಂದಿಸಿದರು. ಸದಸ್ಯ ಸಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು.
ಬ್ಯಾರಿ ಅಕಾಡಮಿಯ ಕಚೇರಿ ನಿರ್ಮಾಣದ ಶಿಲಾನ್ಯಾಸಕ್ಕೆ ಸರಕಾರವೇ ಅನುಮೋದನೆ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಯ ಒಪ್ಪಿಗೆ ಪಡೆದು ಕಾರ್ಯಕ್ರಮ ನಡೆಯುತ್ತಿರುವಾಗ ಜನರನ್ನು ಸೇರಿಸಿಕೊಂಡು ಜಿಂದಾಬಾದ್, ಮುರ್ದಾಬಾದ್ ಎಂದು ಕೂಗಿಸಿ ಬಲಿಪಶು ಮಾಡುವುದು ಸರಿಯಲ್ಲ.
-ಯು.ಟಿ.ಖಾದರ್, ಶಾಸಕ, ವಿಪಕ್ಷ ಉಪನಾಯಕರು
ಇತರ ಅಕಾಡಮಿಗಳ ಭವನದ ಶಿಲಾನ್ಯಾಸವು ಗೌರವಯುತವಾಗಿ ಆಗುತ್ತದೆ, ಆದರೆ ನಾವು ಪೊಲೀಸರನ್ನಿಟ್ಟು ಶಿಲಾನ್ಯಾಸ ನಡೆಸಬೇಕಾಗಿದೆ. ಶಿಲಾನ್ಯಾಸಕ್ಕೆ ಅವಕಾಶ ಕೊಟ್ಟ ಬಿಜೆಪಿ, ಸಂಘಪರಿವಾರಕ್ಕೆ ಧನ್ಯವಾದಗಳು, ಸಚಿವರು ದೊಡ್ಡ ಮೊತ್ತದ ಅನುದಾನ ಕೊಟ್ಟಿದ್ದಾರೆ. ವಿರೋಧ ವ್ಯಕ್ತಪಡಿಸಿದವರಿಗೆ ದೈವ-ದೇವರಿಂದಲೇ ಉತ್ತರ ಸಿಗಲಿದೆ. ನಾಳೆ ಕಾಮಗಾರಿಗೆ ತೊಂದರೆ ಕೊಟ್ಟರೆ ಇಲಾಖೆ ನೋಡಿಕೊಳ್ಳಲಿದೆ.
-ರಹೀಂ ಉಚ್ಚಿಲ್ ಅಧ್ಯಕ್ಷ, ಬ್ಯಾರಿ ಸಾಹಿತ್ಯ ಅಕಾಡಮಿ
