ಮಣಿಪಾಲ: ಕಾಂಗ್ರೆಸ್ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ
ಮಣಿಪಾಲ, ಫೆ.26: ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ವಿಧಾನಸಭೆ ಅಧಿವೇಶನಕ್ಕೆ ಅಡ್ಡಿ ಉಂಟು ಮಾಡಿರುವ ಕಾಂಗ್ರೆಸ್ ವಿರುದ್ಧ ಜಿಲ್ಲ್ಲಾ ಬಿಜೆಪಿ ವತಿಯಿಂದ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.
ಮಣಿಪಾಲದ ಟೈಗರ್ ಸರ್ಕಲ್ ಬಳಿ ಹಮ್ಮಿಕೊಳ್ಳಲಾದ ಪ್ರತಿಭಟನೆ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಡಿಕೆಶಿ ಮತ್ತು ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಈಶ್ವರಪ್ಪನವರು ಮುಂದೊಂದು ದಿನ ಕೇಸರಿ ಧ್ವಜ ನಮ್ಮ ರಾಷ್ಟ್ರಧ್ವಜ ಆಗಬಹುದು ಎಂದಿದ್ದಾರೆ. ಇಂದು ಅಥವಾ ನಾಳೆ ಆಗುತ್ತದೆ ಎಂದು ಅವರೇನು ಹೇಳಿಲ್ಲ. ಈ ಮಾತನ್ನು ನಾನು ಕೂಡ ಸಮರ್ಥನೆ ಮಾಡಿಕೊಳ್ಳುತ್ತಿದ್ದು ಮುಂದೊಂದು ದಿನ ಆದರೂ ಆಗಬಹುದು. ಈ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್ ವಿಧಾನಸಭೆ ಅಧಿವೇಶನಕ್ಕೆ ವಿನಾಕಾರಣ ಅಡ್ಡಿ ಉಂಟು ಮಾಡುತ್ತಿದ್ದು, ಹಿಜಾಬ್ ವಿಚಾರವನ್ನು ಮರೆಮಾಚಲು ಕಾಂಗ್ರೆಸ್ ಈ ರೀತಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
ವಿಧಾನಮಂಡಲ ಅಧಿವೇಶನವನ್ನು ಬಹಿಷ್ಕರಿಸಿರುವ ಕಾಂಗ್ರೆಸ್ನ ಕ್ರಮ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ ವಿರೋಧಿಯಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ನುಡಿದರು.
ಮಟ್ಟಾರು ರತ್ನಾಕರ ಹೆಗ್ಡೆ, ಮಹೇಶ್ ಠಾಕೂರ್, ಸುಪ್ರಸಾದ್ ಶೆಟ್ಟಿ ಸೇರಿದಂತೆ ಜಿಲ್ಲಾಮಟ್ಟದ ಭಾರೀ ಸಂಖ್ಯೆಯ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.