'ಗಾಂಧಿ ಬಗ್ಗೆ ದ್ವೇಷಪೂರಿತವಾಗಿ ನಿಂದಿಸುವ ವರ್ಗದ ಬೆಳವಣಿಗೆ ಆತಂಕಕಾರಿ'
ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಡಾ.ಮಹಾಬಲೇಶ್ವರ ರಾವ್

ಉಡುಪಿ, ಮಾ.1: ಗಾಂಧೀಜಿ ದೈವಾಂಶ ಸಂಭೂತರು ಎಂದು ಭಾವಿಸಿ ಅವರಲ್ಲಿ ಆರಾಧನಾ ಭಾವ ಮಾತ್ರ ಇರುವ ಒಂದು ವರ್ಗ ಹಾಗೂ ಗಾಂಧೀಜಿ ನಮ್ಮ ನಿಮ್ಮಂತೆ ಮನುಷ್ಯರು, ಅವರ ಜೀವನದ ವಿಮರ್ಶೆ ಸಾಧ್ಯ ಎಂದು ಭಾವಿಸುವ ಇನ್ನೊಂದು ವರ್ಗವೂ ಇದೆ. ಆದರೆ ಗಾಂಧೀಜಿ ಅವರನ್ನು ತಿಳಿದು ಕೊಳ್ಳದೆ ದ್ವೇಷಪೂರಿತವಾಗಿ ನಿಂದಿಸುವ ವರ್ಗವೊಂದು ದೊಡ್ಡದಾಗಿ ಬೆಳೆಯುತ್ತಿ ರುವುದು ನಿಜವಾಗಿಯೂ ಆತಂಕಕಾರಿ ಸಂಗತಿ ಎಂದು ಖ್ಯಾತ ಶಿಕ್ಷಣ ತಜ್ಞ ಹಾಗೂ ಲೇಖಕ ಡಾ.ಮಹಾಬಲೇಶ್ವರ ಹೇಳಿದ್ದಾರೆ.
ಬೊಳುವಾರು ಮಹಮದ್ ಕುಂಞಿ ಇವರು ಬರೆದಿರುವ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’ ಕೃತಿಯು ವಿದ್ಯಾರ್ಥಿಗಳು ಗಾಂಧೀಜಿಯನ್ನು ಅರಿತು ಕೊಳ್ಳಲು ಉಪಯುಕ್ತವಾದ ಪುಸ್ತಕವಾಗಿದೆ ಎಂದವರು ಹೇಳಿದರು.
ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ಉಡುಪಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರ ಮತ್ತು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇವುಗಳ ಆಶ್ರಯದಲ್ಲಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬೊಳುವಾರು ಅವರ ‘ಪಾಪು ಗಾಂಧಿ’ ಹಾಗೂ ಡಾ.ಮಹಾಬಲೇಶ್ವರ ರಾವ್ ಅವರ ‘ಬರಿಯ ಬಟ್ಟೆಯಲ್ಲ ಭಾರತದ ಬಾವುಟ’ ಪುಸ್ತಕಗಳ ಆಧಾರಿತ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು. ಕಾರ್ಯಕ್ರಮ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಿತು.
ಭಾರತದ ಬಾವುಟವನ್ನು ಕೇವಲ ಬಟ್ಟೆಯಾಗಿ ನೋಡುವುದು ಸರಿಯಲ್ಲ. ಅದು ದೇಶಭಕ್ತಿಯ ಸಂಕೇತ. ಅದನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಅದು ರೂಪುಗೊಂಡ ಬಗೆಯ ಇತಿಹಾಸವನ್ನು ತಿಳಿಯುವುದು ತನ್ಮೂಲಕ ಬಾವುಟದ ಕುರಿತು ಗೌರವಭಾವ ಮೂಡಿಸುವಂತಹ ಬರಿಯ ಬಟ್ಟೆಯಲ್ಲ ಭಾರತದ ಬಾವುಟ ಪುಸ್ತಕ ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ಭಾವವನ್ನು ಮೂಡಿಸಲು ಸಹಕಾರಿಯಾಗಿದೆ ಎಂದು ಡಯಟ್‌ನ ಉಪಪ್ರಾಂಶುಪಾಲ ಡಾ. ಅಶೋಕ್ ಕಾಮತ್ ತಿಳಿಸಿದರು.
ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ್ ನಾಯ್ಕಾ, ಗಾಂಧೀಜಿ ಪ್ರತಿ ಯೊಂದು ಕಾಲದಲ್ಲೂ ಪ್ರಸ್ತುತರು. ಆಳವಾದ ಅಧ್ಯಯನ ನಡೆಸುತ್ತಾ ಹೋದಂತೆ ಸರಳವೆನಿಸುವ ಅವರ ಜೀವನ ಮತ್ತು ವಿಚಾರಧಾರೆಗಳು ಸಂಕೀರ್ಣವಾಗಿ ಕಾಣಿಸುತ್ತದೆ ಎಂದರು.
ಸೇವಾದಳದ ಪಕೀರಪ್ಪ ಗೌಡ, ಗಾಂಧಿ ಅಧ್ಯಯನ ಕೇಂದ್ರದ ವಿನೀತ್ ರಾವ್ ಉಪಸ್ಥಿತರಿದ್ದರು.ಭಾರತೀಯ ವಿಕಾಸ ಟ್ರಸ್ಟಿನ ಮುಖ್ಯ ವ್ಯವಸ್ಥಾಪಕ ಮನೋಹರ ಕಟ್ಗೇರಿ ಸ್ವಾಗತಿಸಿದರು. ಬಿವಿಟಿ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಕಾರ್ಯಕ್ರಮ ನಿರೂಪಿಸಿದರು. ಬಿವಿಟಿ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ವಂದಿಸಿದರು.
ಜಿಲ್ಲೆಯ 19 ಪ್ರೌಢಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.