ವಿದ್ಯುತ್ ತಗುಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಬೈಂದೂರು ಶಾಸಕರಿಂದ ಆರ್ಥಿಕ ಸಹಾಯ

ಕುಂದಾಪುರ, ಮಾ.3: ಕಳೆದ ವಾರ ತಾಲೂಕಿನ ಸೌಕೂರು ಎಂಬಲ್ಲಿ ರಥೋತ್ಸವಕ್ಕಾಗಿ ಬ್ಯಾನರ್ ಅಳವಡಿಸು ತ್ತಿದ್ದ ವೇಳೆ ಆಕಸ್ಮಿಕವಾಗಿ ಫ್ಲೆಕ್ಸ್ ವಿದ್ಯುತ್ ತಂತಿಗೆ ತಗುಲಿ ಮೃತಪಟ್ಟ ಸೌಕೂರು ನಿವಾಸಿ ಪ್ರಶಾಂತ್ ದೇವಾಡಿಗ ಎಂಬ ಯುವಕನ ಕುಟುಂಬಕ್ಕೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ವೈಯಕ್ತಿಕವಾಗಿ 1 ಲಕ್ಷ ರೂ. ಆರ್ಥಿಕ ಸಹಾಯ ನೀಡಿದ್ದಾರೆ.
ಗುರುವಾರ ಬೆಳಿಗ್ಗೆ ಮೃತ ಯುವಕನ ಮನೆಗೆ ತೆರಳಿದ ಬಿ.ಎಂ ಸುಕುಮಾರ ಶೆಟ್ಟಿ ಪೋಷಕರಿಗೆ ಸಾಂತ್ವಾನ ಹೇಳಿದರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ವಿದ್ಯುತ್ ಶಾಕ್ನಿಂದ ಮೃತಪಟ್ಟ ಯುವಕ ಬಡ ಕುಟುಂಬ ದಿಂದ ಬಂದಿದ್ದು ಮನೆಯ ಜವಾಬ್ದಾರಿ ಹೊತ್ತಿದ್ದರು. ಆತನನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ ಎಂದರು.
ಮೃತ ಪ್ರಶಾಂತ್ ದೇವಾಡಿಗ ಬಿ.ಬಿ.ಹೆಗ್ಡೆ ಕಾಲೇಜಿನ ಹಳೆ ವಿದ್ಯಾರ್ಥಿ ಯಾಗಿದ್ದು ಉತ್ತಮ ಗುಣನಡತೆ ಹೊಂದಿದ್ದ. ವೈಯಕ್ತಿಕವಾಗಿ ಆತನ ಕುಟುಂಬಕ್ಕೆ ಒಂದು ಲಕ್ಷ ನೆರವು ನೀಡಿದ್ದು, ಕಾಲೇಜಿನಿಂದಲೂ ನೆರವು ನೀಡುವ ಬಗ್ಗೆ ಪ್ರಾಂಶುಪಾಲರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸೌಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಬ್ಲಾಡಿ ಮಂಜಯ್ಯ ಶೆಟ್ಟಿ ವೈಯಕ್ತಿಕವಾಗಿ 15 ಸಾವಿರ ರೂ. ಹಣವನ್ನು ಮೃತರ ಕುಟುಂಬಕ್ಕೆ ನೀಡಿದರು. ಬಳಿಕ ಶಾಸಕರು ಘಟನೆಯ ಗಾಯಾಳು ಕುಟುಂಬಸ್ಥರನ್ನು ಭೇಟಿಯಾಗಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶೇಖರ ಪೂಜಾರಿ ಗುಲ್ವಾಡಿ, ಸುಬ್ಬಣ್ಣ ಶೆಟ್ಟಿ ಕೆಂಚನೂರು, ಕುಪ್ಪ ಸೌಕೂರು, ಜಯರಾಮ ಶೆಟ್ಟಿ ಹಡಾಳಿ, ಆಶಾ ಸಂತೋಷ್ ಪೂಜಾರಿ, ರೀತಾ ದೇವಾಡಿಗ ಸೌಕೂರು, ರಂಜಿತ್ ಪೂಜಾರಿ ಕರ್ಕಿ, ದೇವಾಡಿಗರ ಸಮಾಜ ಸೇವಾ ಸಂಘ ಕುಂದಾಪುರದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಕಾರ್ಯದರ್ಶಿ ಉದಯ ದೇವಾಡಿಗ, ಸ್ಥಳೀಯರಾದ ಗೋಪಾಲ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.
ಹಿನ್ನೆಲೆ: ಕಳೆದ ಶನಿವಾರ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಹಿನ್ನೆಲೆಯಲ್ಲಿ ಬ್ಯಾನರ್ ಅಳವಡಿಸಲು ಹೋದಾಗ ಟ್ರಾನ್ಸ್ ಫಾರ್ಮರ್ ತಂತಿ ಹಾದು ಹೋಗಿದ್ದು ಅರಿವಿಗೆ ಬಾರದೇ ಫ್ಲೆಕ್ಸ್ ಕಟ್ಟುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಸೌಕೂರು ನಿವಾಸಿ ಮೋಹನ ದೇವಾಡಿಗ ಅವರ ಪುತ್ರ ಪ್ರಶಾಂತ ದೇವಾಡಿಗ (24) ಮೃತಪಟ್ಟಿದ್ದರು. ಘಟನೆಯಲ್ಲಿ ಶ್ರೀಧರ ದೇವಾಡಿಗ (45) ಗಂಭೀರ ಗಾಯಗೊಂಡು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.