ಹೊಸದಿಲ್ಲಿಗೆ ಬಂದಿಳಿದ ನಿಯಮ್ ರಾಘವೇಂದ್ರ, ಅಂಕಿತ ಜಗದೀಶ್
ಶುಕ್ರವಾರ ಮುಂಜಾನೆ ರೋಹನ್ ಧನಂಜಯ ಹೊಸದಿಲ್ಲಿಗೆ

ನಿಯಮ್ , ರೋಹನ್
ಉಡುಪಿ, ಮಾ.3: ಕಳೆದೊಂದು ವಾರದಿಂದ ಆತಂಕದಿಂದ ಪ್ರತಿಕ್ಷಣವನ್ನು ಕಳೆದ ಯುದ್ಧಗ್ರಸ್ಥ ಉಕ್ರೇನ್ನಲ್ಲಿದ್ದ ಉಡುಪಿ ಜಿಲ್ಲೆಯ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಸಮಾಧಾನದ ನಿಟ್ಟುಸಿರುವ ಬಿಡುವಂತೆ ಇಬ್ಬರು ಈಗಾಗಲೇ ಹೊಸದಿಲ್ಲಿಗೆ ಬಂದು ತಲುಪಿದ್ದು, ಒಬ್ಬರು ನಾಳೆ ಮುಂಜಾನೆ ಹೊಸದಿಲ್ಲಿಗೆ ಆಗಮಿಸಲಿದ್ದಾರೆ.
ಪರ್ಕಳದ ನಿಯಮ್ ರಾಘವೇಂದ್ರ ಹಾಗೂ ಬೈಂದೂರು ತಾಲೂಕು ನಾವುಂದದ ಜಗದೀಶ್ ಪೂಜಾರಿ ಎಂಬವರ ಪುತ್ರಿ ಅಂಕಿತ ಜಗದೀಶ್ ಪೂಜಾರಿ ಅವರು ಇಂದು ಅಪರಾಹ್ನದ ವೇಳೆಗೆ ಹೊಸದಿಲ್ಲಿ ತಲುಪಿದ್ದಾರೆ. ಬ್ರಹ್ಮಾವರದ ರೋಹನ್ ಧನಂಜಯ ಬಗ್ಲಿ ಅವರು ನಾಳೆ ಬೆಳಗ್ಗೆ 6 ಗಂಟೆಗೆ ಹೊಸದಿಲ್ಲಿ ತಲುಪುವ ನಿರೀಕ್ಷೆ ಇದ್ದು, ಅಲ್ಲಿಂದ ನೇರವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಪರ್ಕಳ ಮೂಲದ ನಿಯಮ್ ರಾಘವೇಂದ್ರ (20) ಉಕ್ರೇನ್ ಗಡಿ ದಾಟಿ ಕಳೆದೆರಡು ದಿನಗಳಲ್ಲಿಂದ ರೊಮೇನಿಯಾದ ಬುಕಾರೆಸ್ಟ್ನಲ್ಲಿ ಭಾರತದ ವಿಮಾನಕ್ಕಾಗಿ ಕಾಯುತಿದ್ದರು. ನಿನ್ನೆ ರಾತ್ರಿ ಅಲ್ಲಿಂದ ಹೊರಟ ವಿಮಾನದಲ್ಲಿ ಇಂದು ಬೆಳಗಿನ ಜಾವ 4:30ಕ್ಕೆ ಮುಂಬೈ ತಲುಪಿದ ನಿಯಮ್ ಬಳಿಕ ಅಪರಾಹ್ನ 12 ಗಂಟೆಗೆ ಹೊಸದಿಲ್ಲಿ ತಲುಪಿದ್ದಾರೆ. ನಿಯಮ್ ತಂದೆ ಬಿ.ವಿ. ರಾಘವೇಂದ್ರ ಹೊಸದಿಲ್ಲಿ ಕರ್ನಾಟಕ ಭವನದ ಮ್ಯಾನೇಜರ್ ಆಗಿರುವುದ ರಿಂದ ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಅವರು ಎಂದು ಮಣಿಪಾಲಕ್ಕೆ ಬರಲಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ.
ಖಾರ್ಕೀವ್ನಲ್ಲಿ ಕಲಿಯುತ್ತಿದ್ದ ನಾವುಂದ ಅಂಕಿತ ಜಗದೀಶ್ ಪೂಜಾರಿ (22) ಲೈವ್ಗೆ ಮೂಲಕ ಪೊಲೆಂಡ್ ತಲುಪಿದ್ದು, ಅಲ್ಲಿಂದ ಭಾರತ ಸರಕಾರ ಕಳುಹಿಸಿದ ವಿಮಾನದಲ್ಲಿ ಇಂದು ಹೊಸದಿಲ್ಲಿಗೆ ಬಂದಿದ್ದಾರೆ. ಅವರು ಯಾವಾಗ ಊರಿಗೆ ಬರುತ್ತಾರೆ ಎಂಬ ಬಗ್ಗೆ ತಕ್ಷಣಕ್ಕೆ ಗೊತ್ತಾಗಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಬೈಂದೂರು ತಹಶೀಲ್ದಾರ್ ತಿಳಿಸಿದ್ದಾರೆ.
ರಾತ್ರಿ 10ಕ್ಕೆ ವಿಮಾನವೇರಿದ ರೋಹನ್: ಖಾರ್ಕೀವ್ನ ನೇಶನಲ್ ಮೆಡಿಕಲ್ ಯುನಿವರ್ಸಿಟಿಯ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಬಿ.ಧನಂಜಯ ಅವರು ಪುತ್ರ ರೋಹನ್ ಬಗ್ಲಿ (24) ಖಾರ್ಕೀವ್ನಿಂದ ನಾಲ್ಕು ದಿನಗಳ ಕಾಲ ಅನ್ನನೀರು ಇಲ್ಲದೇ ಆತಂಕದ ಕ್ಷಣಗಳನ್ನು ಎದುರಿಸಿ ಮಂಗಳವಾರ ಲೈವ್ಗೆ ಬಂದಿದ್ದು, ಕೊನೆಗೂ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ನೆರವಿನಿಂದ ಪೊಲೆಂಡ್ ವಿಮಾನ ನಿಲ್ದಾಣ ತಲುಪಿದ್ದರು.
ಹಲವು ಗಂಟೆಗಳ ಕಾಯುವಿಕೆಯ ಬಳಿಕ ಶುಕ್ರವಾರ ಬೆಳಗ್ಗೆ ಹೊಸದಿಲ್ಲಿ ವಿಮಾನದಲ್ಲಿ ತೆರಳುವಂತೆ ಸೂಚಿಸಿದ್ದ ಧೂತಾವಾಸದ ಅಧಿಕಾರಿಗಳು ಇಂದು ಸಂಜೆಯ ವೇಳೆ ರಾತ್ರಿ 10 ಗಂಟೆಗೆ ಹೊರಡುವ ವಿಮಾನದಲ್ಲಿ ಪ್ರಯಾಣಿಸ ಅವಕಾಶ ಮಾಡಿಕೊಟ್ಟಿದ್ದರು. ರೋಹನ್ ಅವರೊಂದಿಗೆ ಕರ್ನಾಟಕದ ಇನ್ನೂ 20 ಮಂದಿ ವಿದ್ಯಾರ್ಥಿಗಳಿದ್ದು, ಎಲ್ಲರೂ ಒಟ್ಟಿಗೆ ಪ್ರಯಾಣಿಸಲಿದ್ದಾರೆ ಎಂದು ರೋಹನ್ ತಂದೆ ಡಾ.ಧನಂಜಯ ಪತ್ರಿಕೆಗೆ ತಿಳಿಸಿದರು.
ಇಂದು ರಾತ್ರಿ 10ಕ್ಕೆ ಹೊರಡುವ ವಿಮಾನ ನಾಳೆ ಬೆಳಗ್ಗೆ 6ರ ಸುಮಾರಿಗೆ ಹೊಸದಿಲ್ಲಿ ತಲುಪಲಿದ್ದು, ಆ ಬಳಿಕ ರೋಹನ್, ಹೊಸದಿಲ್ಲಿಯಿಂದ ನೇರವಾಗಿ ಮಂಗಳೂರಿಗೆ ಬರಲಿದ್ದಾರೆ. ಹೊಸದಿಲ್ಲಿಯಿಂದ ಕರ್ನಾಟಕಕ್ಕೆ ರಾಯ ಸರಕಾರ ಯಾವುದೇ ವಿಮಾನದ ವ್ಯವಸ್ಥೆ ಕಲ್ಪಿಸಿಲ್ಲ ಎಂದವರು ತಿಳಿಸಿದರು. ಕೊನೆಗೂ ನಾಳೆ ಅಪರಾಹ್ನ ತಾವು ಮಗ ಮುಖ ನೋಡುವ ನಿರೀಕ್ಷೆ ಇದೆ ಎಂದು ಡಾ.ಧನಂಜಯ ತಿಳಿಸಿದರು.
ಉಕ್ರೇನ್ನಿಂದ ಹೊರಬರದ ಉಳಿದಿಬ್ಬರು: ಆದರೆ ಕೆಮ್ಮಣ್ಣುವಿನ ಗ್ಲೆನ್ವಿಲ್ ಫೆರ್ನಾಂಡೀಸ್ ಭಾರತೀಯ ಧೂತಾವಾಸದ ನಿರ್ದೇಶನದಂತೆ ಅವರಿದ್ದ ಖಾರ್ಕೀವ್ ನಗರದ ಸಮೀಪದ ಮತ್ತೊಂದು ಪಟ್ಟಣದಲ್ಲಿದ್ದಾರೆ ಎಂದು ಉಡುಪಿ ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿದೆ. ಕೊನೆಯದಾಗಿ ಕಲ್ಯಾಣಪುರದ ಅನಿಫ್ರೆಡ್ ರಿಡ್ಲೆ ಡಿಸೋಜ ಖಾರ್ಕೀವ್ ನಗರದಿಂದ ರೈಲಿನಲ್ಲಿ ಪೊಲೆಂಡ್ ಗಡಿಯಲ್ಲಿರುವ ಲೈವ್ ನಗರಕ್ಕೆ ಪ್ರಯಾಣಿಸುತಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಬಂದ ಮಾಹಿತಿ ತಿಳಿಸಿದೆ.
ಈ ಮೂಲಕ ಉಕ್ರೇನಿನಲ್ಲಿದ್ದ ಏಳು ಮಂದಿ ಉಡುಪಿ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಮೊದಲೇ ಬಂದ ಮೃಣಾಲ್ ಹಾಗೂ ನಂದಿನಿ ಅರುಣ್ ಸೇರಿದಂತೆ ನಾಲ್ವರು ಈಗಾಗಲೇ ಸ್ವದೇಶಕ್ಕೆ ಮರಳಿದಂತಾಗಿದೆ. ಇನ್ನೊಬ್ಬರು ನಾಳೆ ತಲುಪಲಿದ್ದು, ಕಲ್ಯಾಣಪುರದ ಇಬ್ಬರು ವಿದ್ಯಾರ್ಥಿಗಳು ಮಾತ್ರ ಬರಲು ಬಾಕಿ ಉಳಿಯಲಿದೆ.