ಬೆಳ್ತಂಗಡಿ: ನಿರ್ಗತಿಕ,ವಿಧವೆಯರಿಗಾಗಿ ಸುಸಜ್ಜಿತ ವಸತಿ ಸಮುಚ್ಚಯ ನಿರ್ಮಿಸಿಕೊಟ್ಟ ಸೌತ್ ಕರ್ನಾಟಕ ಮುಸ್ಲಿಂ ಅಸೋಶಿಯೇಶನ್

ಬೆಳ್ತಂಗಡಿ: ತಾಲೂಕಿನ ಪಣಕಜೆ ಎಂಬಲ್ಲಿ ನಿರ್ಗತಿಕ ಮತ್ತು ವಿದವೆಯರ ಕುಟುಂಬಕ್ಕಾಗಿ ನಿರ್ಮಿಸಿರುವ ಸೌಲಭ್ಯಪೂರ್ಣ ಅಪಾರ್ಟ್ ಮೆಂಟ್ ನ ಉದ್ಘಾಟನೆ ಇತ್ತೀಚೆಗೆ ಸರಳವಾಗಿ ನಡೆಸಲಾಯಿತು. ಸೌತ್ ಕರ್ನಾಟಕ ಮುಸ್ಲಿಂ ವೆಲ್ ಫೇರ್ ಅಶೊಸಿಯೇಶನ್ ನ ಮೂಲಕ ಬಡವರಿಗೆ ಕೊಡುಗೆಯಾಗಿ ನೀಡುವ ಈ ಸುಸಜ್ಜಿತ ವಸತಿ ಸಮುಚ್ಚಯದಲ್ಲಿ ಎಂಟು ಮನೆಗಳಿವೆ. ಉದ್ಘಾಟನೆಯನ್ನು ಸಂಘಟನೆಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ಮತ್ತು ಪದಾಧಿಕಾರಿಗಳು ನೆರವೇರಿಸಿದರು.
ಬೆಳ್ತಂಗಡಿ ತಾಲೂಕಿನಲ್ಲಿ 2008 ರಲ್ಲಿ ಆಕ್ರಂದನ ಅಧ್ಯಯನ ತಂಡದ ವರದಿಯ ನಂತರ ಹಲವು ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ದಿ ಯೋಜನೆಗಳು ನಡೆಯುತ್ತಿದೆ. ಹಿಂದುಳಿದ ಪ್ರದೇಶವಾದ ಇಲ್ಲಿನ ಜನರ ಮೂಲಭೂತ ಸೌಲಭ್ಯ, ಆರೋಗ್ಯ, ಶಿಕ್ಷಣಕ್ಕೆ ಸೌತ್ ಕರ್ನಾಟಕ ವೆಲ್ ಫೇರ್ ಅಸೋಶಿಯೇಶನ್ ಕೂಡ ಹಲವಾರು ಕೊಡುಗೆಗಳನ್ನು ನೀಡುತ್ತಿದೆ. ಪ್ರಸ್ತುತ ಕುಟುಂಬಗಳ ಸರ್ವಾಂಗೀಣ ಪ್ರಗತಿ ಮತ್ತು ವೀಕ್ಷಣೆಗೆ ಸಹಕಾರಿಯಾಗುವಂತೆ ಕಾಲನಿಯನ್ನು ನಿರ್ಮಿಸುವ ಉದ್ದೇಶದಿಂದ 24 ಮನೆಗಳ ಯೋಜನೆಯನ್ನು ರೂಪಿಸಿದೆ. ಈಗಾಗಲೇ ಒಂದನೇ ಸ್ಪೇಸ್ ನಲ್ಲಿ 8 ಮನೆಗಳ ಕೆಲಸ ಪೂರ್ಣಗೊಂಡು ಅದು ಬಡವರಿಗೆ ಹಸ್ತಾಂತರಗೊಳ್ಳಲಿದೆ. ಎರಡನೇ ಹಂತದ ಮನೆ ನಿರ್ಮಾಣದ ಕಾಮಗಾರಿಗೆ ಸ್ಥಳೀಯ ಖತೀಬರು ಶಂಕುಸ್ಥಾಪನೆ ನೆರವೇರಿಸಿದರು.
ಉದ್ಯಮಿಗಳಾಗಿ, ವೃತ್ತಿಪರರಾಗಿ ಇರುವ ಕರಾವಳಿ ಮೂಲದ ಸಮಾಜಮುಖಿ ಮಹನೀಯರು ತಮ್ಮ ದುಡಿಮೆಯಲ್ಲಿ ಒಂದಂಶ ಬಡವರಿಗೆ ಮತ್ತು ಅಸಕ್ತರಿಗೆ ನೇರವಾಗಿ ತಲುಪಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಸಂಸ್ಥೆಯ ಪ್ರಮುಖರು, ನಾವು ತಲಮಟ್ಟದ ಜನರ ಸ್ಥಿತಿಯನ್ನು ಅರ್ಥ ಮಾಡಿಕೊಂಡು, ಅವರ ಬೇಡಿಕೆ ಮತ್ತು ಅನಿವಾರ್ಯತೆಯನ್ನು ಗುರುತಿಸಿ ಅದಕ್ಕೆ ಬೇಕಾದ ಸೌಲಭ್ಯ ಮತ್ತು ಅನುಕೂಲತೆ ಒದಗಿಸಿಕೊಡುವುದು ಬಹಳ ತೃಪ್ತಿ ಕೊಡುವ ಸಂಗತಿಯಾಗಿದೆ. ನಮ್ಮ ಸ್ವಂತ ಮೆನೆಗಳ ರೀತಿಯಲ್ಲೇ ನಾವು ಈ ಮನೆಗಳನ್ನು ನಿರ್ಮಿಸಿದ್ದೇವೆ. ವಾತಾವರಣ ಮತ್ತು ಪರಿಸರ ಮನುಷ್ಯನ ಬೆಳವಣಿಗೆಯಲ್ಲಿ ಪಾತ್ರ ವಹಿಸುತ್ತದೆ. ಹಾಗಾಗಿ, ಇಲ್ಲಿ ವಾಸಿಸುವ ಕುಟುಂಬಗಳ ಹಿನ್ನಲೆ ಹೇಗೆ ಬೇಕಾದರೂ ಇರಲಿ, ಇಲ್ಲಿ ಅವರಿಗೆ ಅತ್ಯುತ್ತಮ ವಾತಾವರಣ ಮತ್ತು ಪರಿಸರ ನಿರ್ಮಿಸಿ ಕೊಟ್ಟು, ಅವರ ಮುಂದಿನ ಪೀಳಿಗೆಯನ್ನು ಉನ್ನತ ವ್ಯಕ್ತಿತ್ವದಲ್ಲಿ ರೂಪಿಸುವುದನ್ನು ಮಾಡಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ಮೂಡಬಿದ್ರೆ, ಉಪಾಧ್ಯಕ್ಷರಾದ ಖಾಸಿಂ, ಪ್ರಧಾನ ಕಾರ್ಯದರ್ಶಿಗಳಾದ ಬಶೀರ್ ಬೈಕಂಪಾಡಿ, ಕಾರ್ಯದರ್ಶಿಗಳಾದ ಮಹಮ್ಮದ್ ಶಮೀಮ್ ಹಳೆಯಂಗಡಿ, ಪ್ರಾಜೆಕ್ಟ್ ಕೊರ್ಡಿನೇಟರ್ ಆದ ಫಿರೋಝ್ ಹಾಲಾಡಿ, ಮಹಮ್ಮದ್ ಕುಂಞಿ, ಮುಂತಾದ ಗಣ್ಯರು ಭಾಗವಹಿಸಿದ್ದರು.