ಜನವಾದಿ ಸಂಘಟನೆಯಿಂದ ಮಹಿಳಾ ದಿನಾಚರಣೆ

ಮಂಗಳೂರು, ಮಾ.8: ವಿಶ್ವದ ಮಹಿಳೆಯರು ಹಕ್ಕುಗಳ ಸ್ಥಾಪನೆಗಾಗಿ ಹೋರಾಡಿದ ಪರಿಣಾಮವಾಗಿ 111 ವರ್ಷಗಳಿಂದ ಜಗತ್ತಿನಾದ್ಯಂತ ವಿಶ್ವ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಭಾರತದ ಸಂವಿಧಾನವು ಮಹಿಳೆಯರಿಗೆ ಪುರುಷರಿಗೆ ಸಮಾನವಾದ ಹಕ್ಕು ಸ್ವಾತಂತ್ರ್ಯಗಳನ್ನು ನೀಡಿದ್ದರೂ ಕೂಡ ವಾಸ್ತವವಾಗಿ ಮಹಿಳೆಯರು ಕೆಲವು ವರ್ಷಗಳಿಂದ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯನ್ನು ಈಗ ಕೇಂದ್ರದಲ್ಲಿ ಆಳುತ್ತಿರುವ ಸರಕಾರಗಳು ಬಲಪಡಿಸುತ್ತಿವೆ. ಪ್ರಗತಿಪರ, ಜಾತ್ಯತೀತ ಮೌಲ್ಯಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಅಖಿಲ ಭಾರತ ವಿಮಾ ನೌಕರರ ಸಂಘದ ಪ್ರಾದೇಶಿಕ ಕಾರ್ಯದರ್ಶಿ ರಾಧಿಕಾ ಕಾಮತ್ ನುಡಿದರು.
ನಗರದ ಬೋಳಾರದಲ್ಲಿ ಜನವಾದಿ ಮಹಿಳಾ ಸಂಘಟನೆಯ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಮಂಗಳವಾರ ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಎಸ್‌ಎಫ್‌ಐ ನಾಯಕಿ ಮಾಧುರಿ ಬೋಳಾರ್ ಮಹಿಳಾ ದಿನಾಚರಣೆಯ ಸಂದೇಶ ನೀಡಿದರು. ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಜಯಂತಿ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಂಘಟನೆಯ ಉಪಾಧ್ಯಕ್ಷೆ ಹೇಮಲತಾ, ಪದ್ಮಾವತಿ ಶೆಟ್ಟಿ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ವಾಸುದೇವ ಉಚ್ಚಿಲ ಭಾಗವಸಿದ್ದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ್ ಸ್ವಾಗತಿಸಿದರು. ಕೋಶಾಧಿಕಾರಿ ರಾಧಾ ವಂದಿಸಿದರು.