ಮಂಗಳೂರು; ಡೆತ್ ನೋಟ್ ಬರೆದಿಟ್ಟು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ
ಇಬ್ಬರ ವಿರುದ್ಧ ಪ್ರಕರಣ ದಾಖಲು

ಮಂಗಳೂರು, ಮಾ.16: ನಗರದ ಕಾಲೇಜೊಂದರ ವಿದ್ಯಾರ್ಥಿ, ಬೆಂಗಳೂರು ಕುಮಾರಸ್ವಾಮಿ ಬಡಾವಣೆಯ ನಿವಾಸಿ ಭರತ್ (20) ಎಂಬಾತ ಮಂಗಳವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಹೊಟೇಲ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಓದುತ್ತಿದ್ದ ಭರತ್ ತಾನು ವಾಸವಿದ್ದ ಪಿ.ಜಿ.ಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆತ್ಮಹತ್ಯೆಗೆ ಮುನ್ನ ತಾಯಿಗೆ ಕರೆ ಮಾಡಿದ್ದಾರೆ. ಆ ವೇಳೆ ಕರೆ ಸ್ವೀಕರಿಸಲು ತಾಯಿಗೆ ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ. ‘ಕಾಲೇಜಿನ ಪ್ರಾಧ್ಯಾಪಕರೊಬ್ಬರು ತಾನು ಮಾಡಿದ ಪ್ರಾಜೆಕ್ಟ್ ವರ್ಕ್ ಸರಿ ಇಲ್ಲ ಎಂದು ಸಹಿ ಮಾಡದೆ ಮನಸ್ಸಿಗೆ ನೋವಾಗುವಂತೆ ನಡೆದುಕೊಂಡರು. ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಆದುದರಿಂದ ಈ ಲೋಕವನ್ನು ತ್ಯಜಿಸುತ್ತಿದ್ದೇನೆ’ ಎಂದು ವಿದ್ಯಾರ್ಥಿ ಭರತ್ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಿಂದ ಬುಧವಾರ ಮಂಗಳೂರಿಗೆ ಆಗಮಿಸಿರುವ ತಂದೆ, ತಾಯಿ ಮಗನ ಸಾವಿಗೆ ಕಾರಣರಾಗಿರು ವವರ ವಿರುದ್ಧ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಉರ್ವ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.
ಕರಾವಳಿ ಕಾಲೇಜಿನ ಅಧ್ಯಕ್ಷ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲು
ಉರ್ವ ಪೊಲೀಸರಿಗೆ ಭಾಸ್ಕರ್ ಅವರು ನೀಡಿದ ದೂರಿನಲ್ಲಿ ನನ್ನ ಮಗ ಭರತ್‌ನ ಸಾವಿಗೆ ಕಾರಣರಾದ ಪ್ರಾಧ್ಯಾಪಕ ರಾಹುಲ್ ಮತ್ತು ಕಾಲೇಜಿನ ಅಧ್ಯಕ್ಷ ಗಣೇಶ್ ರಾವ್ ವಿರುದ್ಧ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಅದರಂತೆ ಉರ್ವ ಪೊಲೀಸರು ಕರಾವಳಿ ಕಾಲೇಜಿನ ಪ್ರಾಧ್ಯಾಪಕ ರಾಹುಲ್ ಮತ್ತು ಅಧ್ಯಕ್ಷ ಗಣೇಶ್ ರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
