ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಿಂದ ಆಸಕ್ತ ರೈತರಿಗೆ ಕಬ್ಬಿನ ಸಸಿ ವಿತರಣೆ
ಬ್ರಹ್ಮಾವರ : ರಾಜ್ಯದ ಕರಾವಳಿಯಲ್ಲಿರುವ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾದ ಬ್ರಹ್ಮಾವರದ ದ.ಕ. ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ಕಾರ್ಖಾನೆಯ ಆಡಳಿತ ಮಂಡಳಿ ಪ್ರಯತ್ನ ನಡೆಸುತಿದ್ದು, ಈ ಹಿನ್ನೆಲೆಯಲ್ಲಿ ರೈತರು ಹೆಚ್ಚು ಹೆಚ್ಚು ಕಬ್ಬು ಬೆಳೆಯುವಂತೆ ಕಾರ್ಖಾನೆಯ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಬೈಕಾಡಿ ಕರಾವಳಿಯ ರೈತರಲ್ಲಿ ಮನವಿ ಮಾಡಿದ್ದಾರೆ.
೨,೫೦೦ ಟನ್ ಸಾಮರ್ಥ್ಯದ ನೂತನ ಸಕ್ಕರೆ ಕಾರ್ಖಾನೆಯೊಂದಿಗೆ ಇಥೆನಾಲ್ ಮತ್ತಿತರ ಸಹ ಉತ್ಪಾದನಾ ಘಟಕಗಳೊಂದಿಗೆ ಕಾರ್ಖಾನೆಯನ್ನು ಪುನರಾರಂಭಿಸುವ ಯೋಜನೆಯನ್ನು ಆಡಳಿತ ಮಂಡಳಿ ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಾರಾಹಿ ಹಾಗೂ ಇತರ ನೀರಾವರಿ ಸೌಲಭ್ಯ ಹೊಂದಿರುವ ರೈತರು ಕಬ್ಬು ಬೆಳೆಯಲು ಮುಂದಾಗುವಂತೆ ಅವರು ಮನವಿ ಮಾಡಿದಾರೆ.
ಕಬ್ಬು ಬೆಳೆಯಲು ಆಸಕ್ತಿ ಹೊಂದಿರುವ ರೈತರಿಗೆ ಕಾರ್ಖಾನೆಯ ವತಿಯಿಂದಲೇ ಕಬ್ಬಿನ ಬೀಜದ ಸಸಿಗಳನ್ನು ಹೊರಜಿಲ್ಲೆಗಳಿಂದ ತರಿಸಿ ಉಚಿತವಾಗಿ ನೀಡಲಾಗುತ್ತದೆ. ರೈತರು ಬೆಳೆದ ಕಬ್ಬನ್ನು ಮುಂದೆ ಕಾರ್ಖಾನೆ ಯಿಂದಲೇ ಉತ್ತಮ ಧಾರಣೆಯೊಂದಿಗೆ ಖರೀದಿಸಲಾಗುವುದು. ಅಲ್ಲದೇ ಕಬ್ಬಿನ ಸಾಗಾಟದ ವ್ಯವಸ್ಥೆಯನ್ನು ಕಾರ್ಖಾನೆಯ ವತಿಯಿಂದ ಮಾಡಲಾಗುವುದು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದುದರಿಂದ ಕಬ್ಬು ಬೆಳೆಯಲು ಆಸಕ್ತಿ ಇರುವ ರೈತರು ಕಬ್ಬು ಬೆಳೆಯಲು ಇರುವ ಜಮೀನಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಕೂಡಲೇ ಕಾರ್ಖಾನೆಯ ಕಚೇರಿಯನ್ನು ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.