ರಾಜ್ಯ ಬಂದ್ಗೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ

ಉಡುಪಿ : ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿಗೆ ಸಂಬಂಧಿಸಿ ಕರೆ ನೀಡಿದ್ದ ಮಾ.17ರ ರಾಜ್ಯ ಬಂದ್ಗೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉಡುಪಿ ನಗರ, ಕಾರ್ಕಳ, ಕುಂದಾಪುರ, ಬೈಂದೂರು, ಶಿರೂರು, ಕಾಪು, ಪಡುಬಿದ್ರೆ, ಶಿರ್ವ ಸೇರಿದಂತೆ ವಿವಿಧ ಕಡೆಗಳಲ್ಲಿ ಬಹುತೇಕ ಮುಸ್ಲಿಮರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್ ಆಚರಿಸಿದರು. ಅದೇ ರೀತಿ ಕೆಲವು ಆಟೋ ರಿಕ್ಷಾ ಚಾಲಕರು, ಮೀನು ವ್ಯಾಪಾರಿ ಗಳು ಕೂಡ ಬಂದ್ಗೆ ಕೈಜೋಡಿಸಿದರು.
ಉಡುಪಿ ನಗರದ ಜಾಮೀಯ ಮಸೀದಿ, ಅಂಜುಮಾನ್ ಮಸೀದಿ ರಸ್ತೆ ಯಲ್ಲಿನ ಎಲ್ಲ ಅಂಗಡಿಗಳು ಸಂಪೂರ್ಣ ಮುಚ್ಚಿ ತಮ್ಮ ವ್ಯವಹಾರವನ್ನು ಸ್ಥಗಿತ ಗೊಳಿಸಿದ್ದವು. ಅದೇ ರೀತಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ಮಾರು ಕಟ್ಟೆಯಲ್ಲಿನ ಬಹುತೇಕ ಮುಸ್ಲಿಮ್ ವ್ಯಾಪಾರಿಗಳ ತರಕಾರಿ ಅಂಗಡಿಗಳು ಬಂದ್ ಆಗಿದ್ದವು. ಅಲ್ಲದೆ ಮುಸ್ಲಿಮರ ಹೊಟೇಲ್, ಹೂವು ಅಂಗಡಿ, ಚಪ್ಪಲಿ, ಬಟ್ಟೆ ಸೇರಿದಂತೆ ಹೆಚ್ಚಿನ ಅಂಗಡಿಗಳು ಬಂದ್ಗೆ ಬೆಂಬಲವಾಗಿ ಬಂದ್ ಆಚರಿಸಿದವು.
ಕುಂದಾಪುರದಲ್ಲೂ ಬಂದ್: ಕುಂದಾಪುರ ಹಾಗೂ ಬೈಂದೂರು ತಾಲೂಕಿ ನಲ್ಲಿಯೂ ರಾಜ್ಯ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆನಿಂದಲೇ ಎಲ್ಲಾ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚುವ ಮೂಲಕ ಮುಸ್ಲಿಮ್ ವರ್ತಕರು ಬಂದ್ ಆಚರಿಸಿದರು. ಕುಂದಾಪುರ ನಗರದಲ್ಲಿ ಮುಸ್ಲಿಂ ಸಮುದಾಯದ ಮಾಲೀಕತ್ವದ ಮಟನ್, ಚಿಕನ್ ಸ್ಟಾಲ್, ಹಣ್ಣಿ ನಂಗಡಿ, ಚಪ್ಪಲಿಯಂಗಡಿ, ಫ್ಯಾನ್ಸಿ ಸ್ಟೋರ್ಗಳು ಬಂದ್ ಆಗಿದ್ದವು.
ಬೈಂದೂರಿನ ಶಿರೂರು, ನಾಗೂರು, ಗಂಗೊಳ್ಳಿಯಲ್ಲೂ ವರ್ತಕರು ಎಲ್ಲಾ ಅಂಗಡಿಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಿದ್ದಾರೆ. ಅದೇ ರೀತಿ ಜಿಲ್ಲೆಯ ಕೆಲವು ಅಲ್ಪಸಂಖ್ಯಾತ ಸಮುದಾಯ ಶಾಲೆಗಳು ಕೂಡ ಬಂದ್ ಆಗಿರುವುದು ಕಂಡುಬಂದವು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ, ಡಿವೈಎಸ್ಪಿ ಸದಾನಂದ ನಾಯಕ್ ವಿವಿಧ ಕಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯ ಎಲ್ಲೂ ಬಲವಂತದ ಬಂದ್ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಉಡುಪಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಾಪುವಿನಲ್ಲೂ ಬಂದ್ಗೆ ಸ್ಪಂದನೆ
ಹಿಜಾಬ್ ಕುರಿತು ಹೈಕೋರ್ಟ್ ನೀಡಿದ ತೀರ್ಪಿಗೆ ಸಂಬಂಧಿಸಿ ಮುಸ್ಲಿಮ್ ಸಂಘಟನೆಗಳು ಕರೆ ನೀಡಿದ ಬಂದ್ಗೆ ಕಾಪು ತಾಲ್ಲೂಕಿನ ಮುಸ್ಲಿಮ್ ಸಮುದಾಯದ ವ್ಯಾಪಾರಸ್ಥರು ಸ್ಪಂದಿಸಿ ವ್ಯವಹಾರವನ್ನು ಸ್ಥಗಿತಗೊಳಿಸಿದ್ದಾರೆ.
ಕಾಪು, ಕಟಪಾಡಿ, ಉಚ್ಚಿಲ, ಪಡುಬಿದ್ರಿ, ಹೆಜಮಾಡಿ, ಮಲ್ಲಾರು, ಬೆಳಪು, ಶಿರ್ವ ಪ್ರದೇಶದಲ್ಲಿ ಮುಸ್ಲಿಮರು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ದ್ದಾರೆ. ಮುಸ್ಲಿಮ್ ಸಮುದಾಯದ ಮಂದಿಯ ರಿಕ್ಷಾ, ಕಾರು, ಟೆಂಪೋಗಳು ಬೀದಿಗೆ ಇಳಿಯಲಿಲ್ಲ. ಕೂಲಿ ಕಾರ್ಮಿಕರು, ಉದ್ಯೋಗಿಗಳು ಕೆಲಸಕ್ಕೆ ಹಾಜ ರಾಗದೆ ಮನೆಯಲ್ಲಿಯೇ ಉಳಿದಿದ್ದರು.
ಕಾಲೇಜುಗಳಿಗೆ ವಿದ್ಯಾರ್ಥಿನಿಯರು ಗೈರು
ಕಾಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಹುತೇಕ ಮುಸ್ಲಿಮ್ ವಿದ್ಯಾರ್ಥಿಗಳು ಇಂದು ಕೂಡ ಗೈರು ಹಾಜರಾಗಿದ್ದಾರೆ.
೨೪ ಮಂದಿ ವಿದ್ಯಾರ್ಥಿಗಳ ಪೈಕಿ ೧೯ ಮಂದಿ ಗೈರು ಹಾಜರಾಗಿದ್ದು, ೧೮ ಮಂದಿ ವಿದ್ಯಾರ್ಥಿಗಳ ಪೈಕಿ ೧೨ ಮಂದಿ ಗೈರು ಹಾಜರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಅನಿಲ್ ಕುಮಾರ್ ತಿಳಿಸಿದ್ದಾರೆ.
ಉಳಿದಂತೆ ಬಹುತೇಕ ಕಾಲೇಜುಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಉಡುಪಿಯಲ್ಲಿ ಹಿಜಾಬ್ಧಾರಿ ವಿದ್ಯಾರ್ಥಿನಿಯರು ತರಗತಿಗೆ ಆಗಮಿಸಿದೆ ಗೈರುಹಾಜರಾಗಿರುವುದಾಗಿ ವರದಿಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಶಾಂತಿಯುತ ಬಂದ್ ನಡೆದಿದ್ದು, ಎಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಯಾವುದೇ ಪ್ರದೇಶದಲ್ಲಿ ಬಲವಂತದ ಬಂದ್ ನಡೆಸಿರುವುದು ಕಂಡುಬಂದಿಲ್ಲ. ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪೊಲೀಸ್ ಭದ್ರತೆಯನ್ನು ಮುಂದುವರೆಸಲಾಗಿತ್ತು.
-ಎನ್.ವಿಷ್ಣುವರ್ಧನ್, ಎಸ್ಪಿ, ಉಡುಪಿ