ʼಸತ್ಯಜಿತ್ ರೇ ಭಾರತೀಯ ಚಿತ್ರಗಳಿಗೆ ಹೊಸ ಸಂವೇದನೆ ನೀಡಿದವರುʼ
ರೇ ಚಲನಚಿತ್ರೋತ್ಸವ ಉದ್ಘಾಟಿಸಿ ಗಿರೀಶ್ ಕಾಸರವಳ್ಳಿ

ಮಣಿಪಾಲ : ಸತ್ಯಜಿತ್ ರೇ ತಮ್ಮ ಚಿತ್ರಗಳ ಮೂಲಕ ಭಾರತೀಯ ಚಿತ್ರಗಳಿಗೆ ಹೊಸ ಸಂವೇದನೆಗಳನ್ನು ನೀಡಿದವರು ಹಾಗೂ ಚಿತ್ರ ತಯಾರಿಕೆಯಲ್ಲಿ ಹೊಸ ವಿಧಾನಗಳನ್ನು ತೋರಿಸಿಕೊಟ್ಟವರು ಎಂದು ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ.
ಮಣಿಪಾಲ ಮಾಹೆ ವಿವಿಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ವತಿಯಿಂದ ಸತ್ಯಜಿತ್ ರೇ ಅವರ ಜನ್ಮ ಶತಾಬ್ಧಿ ಅಂಗವಾಗಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಸತ್ಯಜಿತ್ ರೇ ಚಲನ ಚಿತ್ರೋತ್ಸವವನ್ನು ಮಣಿಪಾಲದ ಡಾ.ಟಿ.ಎಂ.ಎ.ಪೈ ಪ್ಲೆನೆಟೋರಿಯಂ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸತ್ಯಜಿತ್ ರೇ ಅವರಿಗೆ ಚಲನಚಿತ್ರ ಎಂಬುದು ಕಲಾತ್ಮಕ ಅಭಿವ್ಯಕ್ತ ಮಾಧ್ಯಮ ವಾಗಿತ್ತು. ಈ ಮೂಲಕ ಅವರು ಹೊಸ ಸಿನಿಮೀಯ ನುಡಿಗಟ್ಟನ್ನು ಜಾರಿಗೆ ತಂದರು. ರೇ ತಮ್ಮ ಚಿತ್ರಗಳ ಮೂಲಕ ಹೊಸ ವಾಸ್ತವಿಕ ನೆಲೆಗಟ್ಟನ್ನು ಜನತೆಗೆ ಪರಿಚಯಿಸಿದರು. ಹೀಗಾಗಿ ವಿಶ್ವದಾದ್ಯಂತ ಚಿತ್ರ ನಿರ್ಮಾಪಕರು ಅವರನ್ನು ವಿಶ್ವ ಸಿನಿಮಾದ ಗುರು ಎಂದೇ ಗುರುತಿಸುತ್ತಾರೆ. ಈ ಮೂಲಕ ಸತ್ಯಜಿತ್ ರೇ ಒಬ್ಬ ಪರಿಪೂರ್ಣ ಚಲನಚಿತ್ರಕಾರ ರೆಂದೇ ಪರಿಗಣಿಸಲ್ಪಟ್ಟಿದ್ದರು ಎಂದು ಕಾಸರವಳ್ಳಿ ನುಡಿದರು.
ಸತ್ಯಜಿತ್ ರೇ ಭಾರತೀಯ ಸಿನಿಮಾದ ಮಾಸ್ಟರ್ ಆಗಿದ್ದು, ನವಸೂಕ್ಷ್ಮತೆಯನ್ನು ಚಿತ್ರಗಳಿಗೆ ತಂದುಕೊಟ್ಟಿದ್ದಾರೆ. ಪ್ರೇಕ್ಷಕರು ಸ್ವಯಂ ಅಭಿಪ್ರಾಯ ಗಳನ್ನು ರೂಪಿಸಿಕೊಳ್ಳುವಂತಹ ಸಿನಿಮಾವನ್ನು ವ್ಯಾಕರಣ, ತತ್ವಜ್ಞಾನದ ನೆಲೆಯಲ್ಲಿ ನೀಡಿದ್ದರು. ತಮ್ಮ ಅಭಿಪ್ರಾಯವನ್ನು ನೋಡುಗರ ಮೇಲೆ ಹೇರದೆ ಚಿತ್ರದಲ್ಲಿ ಸಮತೋಲನ ಕಾಯ್ದುಕೊಂಡಿದ್ದರು. ಸರಿ ತಪ್ಪುಗಳ ನಿರ್ಧಾರವನ್ನು ಪ್ರೇಕ್ಷಕನೇ ಕೈಗೊಳ್ಳುವಂತಹ ಸ್ವಾತಂತ್ರ್ಯ ನೀಡಿದ್ದರು ಎಂದು ಗಿರೀಶ್ ಕಾಸರವಳ್ಳಿ ಹೇಳಿದರು.
ಮಾಹೆ ವಿವಿ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಪಠ್ಯ ಕಂಠಪಾಠಕ್ಕಿಂತ ಬಹು ಆಯಾಮ, ಅಂತರ್ ಶಿಸ್ತಿನ ಕಲಿಕೆಗೆ ಪೂರಕವಾಗಿದೆ. ಮಕ್ಕಳ ಚಿಂತನಾ ಲಹರಿಗೆ ಅವಕಾಶ ಒದಗಿಸಲಿದೆ. ಮಕ್ಕಳ ಪ್ರಶ್ನೆಗೆ ಉತ್ತರ ಕಂಡು ಕೊಳ್ಳಲು ನಿರಂತರ ಅಧ್ಯಯನ, ಓದಿನಲ್ಲಿ ತೊಡಗಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಮಾಹೆ ವಿವಿ ಕುಲಪತಿ ಲೆ.ಜ.(ಡಾ.) ಎಂ. ಡಿ. ವೆಂಕಟೇಶ್ ಭಾಗವಹಿಸಿದ್ದರು. ಜಿಸಿಪಿಎಎಸ್ನ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ಸ್ವಾಗತಿಸಿ ಮಾ.೧೭ರಿಂದ ೧೯ರವರೆಗೆ ನಡೆಯುವ ಚಿತ್ರೋತ್ಸವ ಮಾಹಿತಿ ನೀಡಿದರು.
ಶ್ರಾವ್ಯಾ ಬಾಸ್ರಿ ಪ್ರಾರ್ಥಿಸಿದರೆ, ಪ್ರೊ.ಫಣಿರಾಜ್ ವಂದಿಸಿದರು. ಮರಿಯಮ್ ರಾಯ್ ಹಾಗೂ ಜ್ಯುಡಿ ಶಿರಿನ್ ಫೇಬರ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರೋತ್ಸವದ ಎರಡನೇ ದಿನವಾದ ನಾಳೆ ಬೆಳಗ್ಗೆ ೯:೩೦ಕ್ಕೆ ರೇ ನಿರ್ದೇಶನದ ರವೀಂದ್ರನಾಥ ಠಾಗೂರ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವಿದ್ದು, ಬಳಿಕ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಂವಾದ ಕಾರ್ಯಕ್ರಮವಿದೆ. ಬಳಿಕ ಕಾಂಚನಜುಂಗಾ , ಮಹಾನಗರ್ ಹಾಗೂ ಘರೆ-ಬೈರೆ ಚಿತ್ರಗಳನ್ನು ಪ್ರದರ್ಶನವಿರುತ್ತದೆ.