ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಕೋಶದ ಪೊಲೀಸರಿಗೆ ನಗದು ಬಹುಮಾನ

ಮಂಗಳೂರು : ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಕೋಶದ ಆರು ಮಂದಿ ಪೊಲೀಸರಿಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಗುರುವಾರ ೧೦ ಸಾವಿರ ರೂ.ನ ನಗದು ಬಹುಮಾನವನ್ನು ಹಸ್ತಾಂತರಿಸಿದರು.
ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಕೋಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್ ಕಾನ್‌ಸ್ಟೇಬಲ್ ರಾಜಾ, ಕಾನ್‌ಸ್ಟೇಬಲ್‌ಗಳಾದ ಅಕಾಶ್ ನಾಯ್ಕ್, ಸಿದ್ದಪ್ಪ ಕಲ್ಮಡ, ವರ್ಗೀಸ್ ಸ್ಕರಿಯ, ಶರಣಬಸವ, ಸುರೇಶ್ ನಗದು ಬಹುಮಾನ ಸ್ವೀಕರಿಸಿದರು.
ಈ ಸಿಬ್ಬಂದಿಗಳು ಕಾನೂನು ಸುವ್ಯವಸ್ಥೆಗೆ ಹಾಗೂ ಕೋಮು ಸಾಮರಸ್ಯಕ್ಕೆ ಸಂಬಂಧಿಸಿದಂತೆ ನಗರ, ರಾಜ್ಯ ಹಾಗೂ ದೇಶದ ಎಲ್ಲಾ ಪ್ರಮುಖ ಸಾಮಾಜಿಕ ಜಾಲತಾಣಗಳ ಮೇಲೆ ವಿಶೇಷ ನಿಗಾ ವಹಿಸುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಸುಧಾರಿತ ತಂತ್ರಜ್ಞಾನಗಳ ಬಳಕೆಯ ಬಗ್ಗೆ ಸೂಕ್ತ ತರಬೇತಿಯನ್ನು ನೀಡಲಾಗುತ್ತಿದೆ.
ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಕೋಶವು ಕಳೆದ ೨ ತಿಂಗಳುಗಳಿಂದ ಸತತವಾಗಿ ಹಲವಾರು ಅಪರಾಧ ಪ್ರಕರಣಗಳು ಹಾಗೂ ಸಾಮಾಜಿಕ ಸಾಮರಸ್ಯವನ್ನು ಕದಡಿಸುವ ಘಟನೆಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯನಿರ್ವಹಣೆಯನ್ನು ಗುರುತಿಸಿ ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಅತ್ಯಂತ ಕಾರ್ಯನೈಪುಣ್ಯತೆಯೊಂದಿಗೆ ಕರ್ತವ್ಯ ನಿರ್ವಹಿಸುವಂತೆ ಪ್ರೋತ್ಸಾಹಿಸುವ ಸಲುವಾಗಿ ಬಹುಮಾನ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.