ಬಾಳೆಪುಣಿ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಗ್ರಾಮವಾಸ್ತವ್ಯ

ಕೊಣಾಜೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಗೆ ಎಂಬ ಘೋಷಣೆಯಂತೆ ಬಾಳೆಪುಣಿ-ಕೈರಂಗಳ ಗ್ರಾಮವನ್ನೊಳಗೊಂಡ ಉಳ್ಳಾಲ ತಾಲೂಕಿನ ಬಾಳೆಪುಣಿ ಗ್ರಾಮ ಪಂಚಾಯಿತಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಹೂಹಾಕುವಕಲ್ಲಿನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ ಜಿಲ್ಲಾಧಿಕಾರಿಗಳ "ಗ್ರಾಮ ವಾಸ್ತವ್ಯ' ಕಾರ್ಯಕ್ರಮದಲ್ಲಿ ಕಂದಾಯ ಸೇರಿದಂತೆ ಗ್ರಾಮದ ಕುಂದು ಕೊರತೆಗಳ ಸುಮಾರು 75ಕ್ಕೂ ಹೆಚ್ಚು ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ 35ಅರ್ಜಿಗಳಿಗೆ ಸ್ಥಳದಲ್ಲಿಯೇ ಸೂಕ್ತ ಪರಿಹಾರ ವ್ಯವಸ್ಥೆ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದರು.
ಗ್ರಾಮವಾಸ್ತವ್ಯದಲ್ಲಿ ನಿವೇಶನ, ವಸತಿಗೆ ಸಂಬಂಧಿಸಿದ ಅರ್ಜಿಯೇ ಇದ್ದುದರಿಂದ ಇದಕ್ಕೆ ಆದ್ಯತೆ ನೀಡಿದ ಜಿಲ್ಲಾಧಿಕಾರಿ ಇಲ್ಲಿರುವ ಪರಿಸರ ಇಲಾಖೆಗೆ ಸೇರಿದ ಸುಮಾರು 10ಎಕರೆ ಜಾಗವನ್ನು ಕಂದಾಯ ಇಲಾಖೆಗೆ ವರ್ಗಾಯಿಸಿ ಅಲ್ಲಿ ನಿವೇಶನ ರಹಿತ 245ಕುಟುಂಬಕ್ಕೆ ಎಕರೆಯಲ್ಲಿ 20ಸೈಟ್‍ಗಳಂತೆ ಅರ್ಹ ಕುಟುಂಬಗಳಿಗೆ ಮನೆ ಕಟ್ಟಿಕೊಡುವ ವ್ಯವಸ್ಥೆ ಮಾಡಲು ತಹಶೀಲ್ದಾರ್ ಹಾಗೂ ಪಂಚಾಯಿತಿಗೆ ಆದೇಶಿಸಿದರು.
ಅಲ್ಲದೆ ಕುಡಿಯುವ ನೀರು, ರಸ್ತೆಯ ಒತ್ತುವರಿ, ಕೆರೆ ಅಭಿವೃದ್ಧಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಯವರು ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿ, ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ಸ್ವಚ್ಛತೆಗೆ ಸಂಬಂಧಿಸಿದಂತೆ ನಿರಂತರ ಕಾರ್ಯ ನಿರ್ವಹಿಸುತ್ತಿರುವ ಪಂಚಾಯಿತಿ ಕಾರ್ಯವೈಖರಿಯನ್ನು ಶ್ಲಾಘಿಸಿದರು. 955 ಮನೆಗಳಿರುವ ಬಾಳೆಪುಣಿ ಗ್ರಾಮದಲ್ಲಿ ಆರು ಸಾವಿರದಷ್ಟು ಜನಸಂಖ್ಯೆ ಇದ್ದರೂ ಕೇವಲ ಮುನ್ನೂರು ಮಂದಿ ಅರುವತ್ತರ ಮೇಲ್ಪಟ್ಟು ಫಲಾನುಭವಿಗಳಿರುವುದನ್ನು ಗಮನಿಸಿದ ಅವರು ಆ ಬಗ್ಗೆ ಮರುಪರಿಶೀಲಿಸುವಂತೆ ಗ್ರಾಮ ಕರಣಿಕರಿಗೆ ಸೂಚಿಸಿದರು.
ಇದೇ ಸಂದರ್ಭ ಗ್ರಾಮ ವಾಸ್ತವ್ಯದಲ್ಲಿ ಸೂಚಿಸಿದ್ದರೂ ಸೂಕ್ತ ಎಂದು ಅನಿಸಿದರೆ ಮಾತ್ರ ವ್ಯವಸ್ಥೆ ಮಾಡಿ, ಸ್ವಲ್ಪ ಸಂಶಯ ಕಂಡರೂ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ ಹಾಗೂ ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಸಿಗದಿದ್ದರೆ ತಹಶೀಲ್ದಾರ್ ಗಮನಕ್ಕೆ ತಂದರೆ ಮತ್ತೆ ಪರಿಹಾರ ಪಡೆದುಕೊಳ್ಳಬಹುದು ಎಂದರು. ಸ್ವ ಉದ್ಯೋಗದಡಿ ಉತ್ಪನ್ನಗಳ ಮಾರಾಟಕ್ಕೆ ಮಹಿಳೆಯರು ವಾರದ ಸಂತೆಗೆ ಸ್ಥಳ ಹಾಗೂ ಕಟ್ಟಡದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದು ಗ್ರಾಮ ಪಂಚಾಯಿತಿ ಕೈಚೆಲ್ಲಿದರೆ ಜಿಲ್ಲಾಧಿಕಾರಿಗಳ ಕಚೇರಿಯಿಂದಲೇ ಸ್ಪಂದಿಸುತ್ತೇವೆ ಎಂದರು.
ಗ್ರಾಮದ ಕೊರಗರ ಕೆಲವೊಂದು ಕಾಲನಿಗೆ ಭೇಟಿ ನೀಡಿ ಸಮಸ್ಯೆ ಪರಿಸೀಲಿಸಿದರು. ಕೊರಗ ಕುಟುಂಬದ 10ನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿದ ಜಲಜಾಕ್ಷಿ ಎಂಬ ವಿದ್ಯಾರ್ಥಿನಿಗೆ ಶಿಕ್ಷಣಕ್ಕೆ ಹಾಸ್ಟೆಲ್‍ನಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿ ನೀವು ನಮ್ಮ ಕುಟುಂಬ ಎಂದು ಸಂತೈಸಿದರೂ ಸ್ಪಂದಿಸದಿದ್ದಾಗ ಸಂಬಂಧಪಟ್ಟ ಮಹಿಳೆಯೊಬ್ಬರಿಗೆ ಆ ವಿದ್ಯಾರ್ಥಿನಿಗೆ ಕೌನ್ಸಿಲಿಂಗ್ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು.
ಕೊರಗರ ದುಸ್ಥಿತಿಗೆ ಮರುಗಿದ ಅವರು ಅಲ್ಲಿಗೆ ಭೇಟಿ ನೀಡಿ ಅವರಿಗೆ ಮೂಲ ಸೌಕರ್ಯ ಸೇರಿದಂತೆ ವಸತಿ ನಿರ್ಮಾಣ ಕಾರ್ಯಕ್ಕೂ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಪಾಂಡಿಕಟ್ಟೆ, ಕುಕ್ಕುದಕಟ್ಟೆ, ಸುಟ್ಟ, ಚಕ್ರಕೋಡಿ ಬಳಿ ಕೊರಗ ಜನಾಂಗದ ಕುಟುಂಬಗಳಿದ್ದು, ಅನೇಕ ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲದ ಕುಡಿಯುವ ನೀರಿನ ವ್ಯವಸ್ಥೆಯೂ ಆಗಬೇಕಾಗಿದೆ ಎಂಬ ಮನವಿ ಮೇರೆಗೆ ತಕ್ಷಣ ಸ್ಪಂದಿಸುವಂತೆ ಸೂಚಿಸಿದರು.
ಬಾಬು ಕೊರಗ, ಗುರುವ ಕೊರಗ, ಬಾಗಿ ಮೊದಲಾದ ಕೊರಗ ಕುಟುಂಬದ ಮನೆಗೆ ಭೇಟಿ ನೀಡಿದರು. ಸ್ಥಳೀಯ ಕೆರೆ ಅಭಿವೃದ್ಧಿ, ಮೂಳೂರು ಇರಾ ರಸ್ತೆ ಪರಿಶೀಲಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಿ.ಜಿ. ಗುರುಪ್ರಸಾದ್, ಜಿಲ್ಲಾಧಿಕಾರಿಯವರ ತಾಂತ್ರಿಕ ಸಹಾಯಕ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕ ನಿರಂಜ್ನ, ಎಸಿ ಮದನ್ ಮೋಹನ್, ರಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಬೆಂಗಳೂರಿನ ಚೇರ್ ಮೆನ್ ಸಂತೋಷ್ ಕುಮಾರ್ ರೈ ಬೋಳಿಯಾರ್, ಗ್ರಾಮ ಪಂ. ಅಧ್ಯಕ್ಷಾದ ರಝಿಯಾ ಬಾನು, ಉಪಾಧ್ಯಕ್ಷೆ ಲಕ್ಷ್ಮಿ, ಬಂಟ್ವಾಳ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ರಾಜಣ್ಣ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ಸಹಕರಿಸಿದರು.