2022ರ ಫಿಫಾ ವಿಶ್ವಕಪ್ ಪಂದ್ಯಾವಳಿಯ ಅಧಿಕೃತ ಚೆಂಡು ಅನಾವರಣಗೊಳಿಸಿದ ಅಡಿಡಾಸ್

ಹೊಸದಿಲ್ಲಿ,ಎ. 1: ಖತರ್‌ನಲ್ಲಿ 2022ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯ ಅಧಿಕೃತ ಚೆಂಡು ಅಲ್-ರಿಹ್ಲಾವನ್ನು ಕ್ರೀಡಾ ಸಲಕರಣೆಗಳ ಉತ್ಪಾದನಾ ಸಂಸ್ಥೆ ಅಡಿಡಾಸ್ ಶುಕ್ರವಾರ ಅನಾವರಣಗೊಳಿಸಿದೆ. ಇದು ಫಿಫಾ ವಿಶ್ವಕಪ್‌ಗಳಿಗಾಗಿ ಅಡಿಡಾಸ್ ತಯಾರಿಸಿರುವ ಸತತ 14ನೇ ಫುಟ್ಬಾಲ್ ಚೆಂಡು. ಇತರ ವಿಶ್ವಕಪ್ ಪಂದ್ಯಾವಳಿಗಳ ಚೆಂಡಿಗಿಂತ ಇದು ಭಿನ್ನವಾಗಿದ್ದು, ಇದನ್ನು ಗಾಳಿಯಲ್ಲಿ ವೇಗವಾಗಿ ಚಲಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ನೀರು ಆಧರಿತ ಶಾಯಿ ಹಾಗೂ ಅಂಟುಗಳನ್ನು ಬಳಸಿ ತಯಾರಿಸಿದ ಮೊದಲ ವಿಶ್ವಕಪ್ ಚೆಂಡು ಇದಾಗಿದೆ. ಅಡಿಡಾಸ್ ಲ್ಯಾಬ್‌ಗಳು, ಗಾಳಿಯ ಸುರಂಗಗಳು ಹಾಗೂ ಮೈದಾನಗಳಲ್ಲಿ ಕಠಿಣ ಪರೀಕ್ಷೆಗಳಿಗೆ ಒಳಪಡಿಸಿದ ಬಳಿಕ ವಿನ್ಯಾಸಗೊಳಿಸಲಾಗಿರುವ ಅಲ್ ರಿಹ್ಲಾ (ಪ್ರಯಾಣ) ಚೆಂಡು ಆಟದ ಮೈದಾನದಲ್ಲಿ ಅತ್ಯುನ್ನತ ಮಟ್ಟದ ನಿಖರತೆ ಹಾಗೂ ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ ಎಂದು ಕಂಪೆನಿಯು ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಟೂರ್ನಮೆಂಟ್‌ನ 92 ವರ್ಷಗಳ ಇತಿಹಾಸದಲ್ಲಿ ಜನರ ಬದುಕಿನ ಮೇಲೆ ಧನಾತ್ಮಕ ಪರಿಣಾಮ ಬೀರುವ ಮೊದಲ ವಿಶ್ವಕಪ್ ಚೆಂಡು ಇದಾಗಿದೆ. ಚೆಂಡಿನ ಮಾರಾಟದಿಂದ ಬರುವ ಶೇ.1ರಷ್ಟು ಆದಾಯ ಕಾಮನ್ ಗೋಲ್ ಚಳವಳಿಗೆ ಹೋಗುತ್ತದೆ ಎಂದು ಪ್ರಕಟನೆ ತಿಳಿಸಿದೆ.