ಕ್ರೈಸ್ತ ವಿದ್ಯಾರ್ಥಿ ವೇತನ ಹಾಗೂ ಫುಡಾರ್ ಪ್ರತಿಷ್ಠಾನ ಪುರಸ್ಕಾರ
ಮಂಗಳೂರು : ಫುಡಾರ್ ಪ್ರತಿಷ್ಠಾನದ ವತಿಯಿಂದ 2020-21ನೇ ಸಾಲಿನಲ್ಲಿ ಉಡುಪಿ ಮತ್ತು ಮಂಗಳೂರು ಧರ್ಮಪ್ರಾಂತದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಹಾಗೂ ಪದವಿಯಲ್ಲಿ ರ್ಯಾಂಕ್ ಗಳಿಸಿದ ಪ್ರತಿಭಾವಂತ ಕ್ರೈಸ್ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಫುಡಾರ್ ಪ್ರತಿಷ್ಠಾನ ಪುರಸ್ಕಾರ-2022 ಕಾರ್ಯಕ್ರಮವು ರವಿವಾರ ನಗರದ ಮಿಲಾಗ್ರಿಸ್ ಜುಬಿಲಿ ಹಾಲ್‌ನಲ್ಲಿ ನಡೆಯಿತು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ ಕ್ರೈಸ್ತ ಸಮಾಜದಲ್ಲಿ ನಡೆಯುತ್ತಿರುವ ಸಾಕಷ್ಟು ಬದಲಾವಣೆ, ಅಭಿವೃದ್ಧಿಗೆ ಸಮುದಾಯದವರ ತ್ಯಾಗ, ದಾನ ನೀಡುವ ಮನೋಭಾವವೇ ಸಾಕ್ಷಿಯಾಗಿದೆ. ದಾನದ ಪ್ರತಿಫಲವಾಗಿ ಧರ್ಮಪ್ರಾಂತದಲ್ಲಿರುವ ಚರ್ಚ್, ಶಿಕ್ಷಣ ಸಂಸ್ಥೆ, ಸೇವಾ ಸಂಸ್ಥೆಗಳು ಅಭಿವೃದ್ಧಿ ಕಂಡಿದೆ ಎಂದರು.
ದಾನ ನೀಡುವವರು ಎಂದಿಗೂ ಬೀದಿಪಾಲಾಗುವ ಪ್ರಮೇಯ ಇಲ್ಲ. ಅವರ ಕಷ್ಟ ಕಾಲದಲ್ಲಿ ಇತರರು ನೆರವಾಗುವ ಕೆಲಸ ಸಮಾಜದಲ್ಲಿ ನಡೆಯುತ್ತಲಿದೆ. ಇಂದಿನ ವಿದ್ಯಾರ್ಥಿಗಳು ಕೇವಲ ನಮ್ಮೂರು ಎಂದು ಗೋಡೆ ಕಟ್ಟುವ ಬದಲು ಇಡೀ ರಾಜ್ಯ, ದೇಶದ ಗಡಿಯನ್ನು ಮೀರಿಕೊಂಡು ವಿಶ್ವವೇ ನಮ್ಮೂರು ಎನ್ನುವ ದೃಷ್ಟಿಯಲ್ಲಿ ಕೆಲಸ ಮಾಡಬೇಕು. ಇದರಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದರು.
ಸಮಾಜದಲ್ಲಿ ದ್ವೇಷ, ವಿಷದ ಬೀಜ ಬಿತ್ತುವ ಕೃತ್ಯ ನಡೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ವಿದ್ಯಾರ್ಥಿಗಳು ಸಮಾಜದ ವರ್ತಮಾನ ಮಾತ್ರವಲ್ಲ ಭವಿಷ್ಯದ ದೃಷ್ಟಿಕೋನವನ್ನು ಬೆಳೆಸಿಕೊಂಡು ದ್ವೇಷ, ವಿಷ ವರ್ತುಲದಲ್ಲಿ ಬೀಳದಂತೆ ಎಚ್ಚರ ವಹಿಸಬೇಕು ಎಂದು ಡಾ.ಪೀಟರ್ ಪಾವ್ಲ್ ಸಲ್ಡಾನ ಹೇಳಿದರು.
ಕಾರ್ಯಕ್ರಮದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ 182 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಲ್ಲದೆ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಆಗಿ ಆಯ್ಕೆಯಾದ ಜೊಯ್ಲಿನ್ ಮೆಂಡೋನ್ಸಾ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಫುಡಾರ್ ಪ್ರತಿಷ್ಠಾನದ ಅಧ್ಯಕ್ಷ ಜೆರಾಲ್ಡ್ ಡಿಕೋಸ್ತಾ, ಇನ್ವೆಸ್ಟ್‌ಮೆಂಟ್ ಅಡ್ವೈಜರ್ ಜೆರಾಲ್ಡ್ ಕುಲಾಸೋ, ಮಂಗಳೂರು ಧರ್ಮಪ್ರಾಂತದ ಕೆಥೋಲಿಕ್ ಸಭಾದ ಆತ್ಮಿಕ ನಿರ್ದೇಶಕ ಫಾ. ಜೆ.ಬಿ. ಸಲ್ಡಾನಾ, ಕೆಥೋಲಿಕ್ ಸಭಾ ಮಂಗಳೂರು ಇದರ ಅಧ್ಯಕ್ಷ ಸ್ಟ್ಯಾನಿ ಲೋಬೋ, ಕೆಥೋಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಮೇರಿ ಡಿಸೋಜ, ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಪೆರ್ಮಾಯಿ, ಪ್ರತಿಷ್ಠಾನದ ಎಲ್‌ರಾಯ್ ಕಿರಣ್ ಕ್ರಾಸ್ಟೋ, ನೈಜಿಲ್ ಪಿರೇರಾ, ಎಲ್.ಜೆ. ಫರ್ನಾಂಡೀಸ್ ಉಪಸ್ಥಿತರಿದ್ದರು. ಫಾ. ವಾಲ್ಟರ್ ಡಿಮೆಲ್ಲೋ ಸ್ವಾಗತಿಸಿದರು.