ದೇಶದಲ್ಲಿ 716 ದಿನಗಳ ಬಳಿಕ ಸಾವಿರಕ್ಕಿಂತ ಕೆಳಗಿಳಿದ ಕೋವಿಡ್ ಸೋಂಕು

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕು ಹಿಂದೆ ಸಾಗುತ್ತಿದೆ ಎನ್ನುವುದರ ಸ್ಪಷ್ಟ ಸೂಚಕವಾಗಿ ದೈನಿಕ ಹೊಸ ಪ್ರಕರಣಗಳ ಸಂಖ್ಯೆ 716 ದಿನಗಳಲ್ಲೇ ಮೊದಲ ಬಾರಿಗೆ ಒಂದು ಸಾವಿರಕ್ಕಿಂತ ಕೆಳಗಿಳಿದಿದೆ.
ರವಿವಾರ ದೇಶದಲ್ಲಿ 999 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದೆ. ಸೋಮವಾರ ಕೂಡಾ 1000ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುವ ನಿರೀಕ್ಷೆ ಇದೆ. 2020ರ ಎಪ್ರಿಲ್ 17ರಂದು ದೇಶದಲ್ಲಿ 922 ಪ್ರಕರಣಗಳು ದಾಖಲಾಗಿದ್ದವು. ಆ ಬಳಿಕ ಸಾಂಕ್ರಾಮಿಕದ ಮೂರು ಪ್ರಮುಖ ಅಲೆಗಳು ದೇಶದಲ್ಲಿ ಗೋಚರಿಸಿದ್ದವು.
ದೇಶದಲ್ಲಿ ಜನವರಿ 17-23ರ ವಾರದಲ್ಲಿ ಮೂರನೇ ಅಲೆ ಉತ್ತುಂಗ ತಲುಪಿದ ಬಳಿಕ ಕಳೆದ ಹತ್ತು ವಾರಗಳಿಂದ ಕೋವಿಡ್-19 ಪ್ರಕರಣಗಳು ನಿರಂತರವಾಗಿ ಇಳಿಯುತ್ತಿವೆ. ಕಳೆದ ವಾರ (ಮಾರ್ಚ್ 28- ಏಪ್ರಿಲ್ 3) ದೇಶದಲ್ಲಿ ಕೇವಲ 8400 ಹೊಸ ಪ್ರಕರಣಗಳು ವರದಿಯಾಗಿದ್ದವು. ಇದು 2020ರ ಎಪ್ರಿಲ್ 13-19ರ ಅವಧಿಯಲ್ಲಿ ದಾಖಲಾದ ಸಂಖ್ಯೆಯ ಬಳಿಕ ಅತ್ಯಂತ ಕನಿಷ್ಠ.
ಎರಡು ವರ್ಷಗಳ ಹಿಂದೆ ದೇಶದಲ್ಲಿ ದಾಖಲಾದ ಸಂಖ್ಯೆ ಈ ಸಾಂಕ್ರಾಮಿಕದ ಆರಂಭಿಕ ಹಂತದಲ್ಲಿ ದಾಖಲಾದ ಸಂಖ್ಯೆಯಾಗಿದೆ. ಕಳೆದ ವಾರ ದೇಶದಲ್ಲಿ 80 ಮಂದಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದು, ಇದು ದೇಶದಲ್ಲಿ ಮೊದಲ ಬಾರಿಗೆ ಲಾಕ್ಡೌನ್ ಹೇರಿಕೆಯಾದ ಅವಧಿಯ ಅಂದರೆ 2020ರ ಮಾರ್ಚ್ 23-29ರ ಅವಧಿಯಲ್ಲಿ ದಾಖಲಾದ ಸಂಖ್ಯೆಯ ಬಳಿಕ ಕನಿಷ್ಠ ಮೃತರ ಸಂಖ್ಯೆಯಾಗಿದೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 12 ಸಾವಿರಕ್ಕೆ ಇಳಿದಿದೆ. ಇದು ಕೂಡಾ 2020ರ ಎಪ್ರಿಲ್ 17ರ ಬಳಿಕ ದಾಖಲಾದ ಕನಿಷ್ಠ ಸಂಖ್ಯೆ. ಕೇರಳದಲ್ಲಿ ಸಾಂಕ್ರಾಮಿಕ ಇಳಿಮುಖವಾಗಿದ್ದರೂ, ದೇಶದಲ್ಲಿ ಅತ್ಯಧಿಕ ಅಂದರೆ 256 ಪ್ರಕರಣಗಳು ಸೋಮವಾರ ದಾಖಲಾಗಿವೆ. ಇದು 2020ರ ಜುಲೈ 6ರ ಬಳಿಕ ದಾಖಲಾದ ಕನಿಷ್ಠ ಸಂಖ್ಯೆ.