ಜಮ್ಮುಕಾಶ್ಮೀರ: ತಿಲಕ, ಹಿಜಾಬ್ ಧರಿಸಿದ್ದಕ್ಕೆ ವಿದ್ಯಾರ್ಥಿನಿಯರಿಗೆ ಥಳಿತ; ಆರೋಪ
ಅಧ್ಯಾಪಕನ ಅಮಾನತು

Photo: ndtv.com
ರಾಜೌರಿ, ಎ. 7: ಜಮ್ಮು ಹಾಗೂ ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ತಿಲಕ ಹಾಗೂ ಹಿಜಾಬ್ ಧರಿಸಿದ ಇಬ್ಬರು ವಿದ್ಯಾರ್ಥಿನಿಯರಿಗೆ ಥಳಿಸಿದ ಆರೋಪಕ್ಕೆ ಸಂಬಂಧಿಸಿ ಸರಕಾರಿ ಶಾಲೆಯ ಅಧ್ಯಾಪಕರೋರ್ವರನ್ನು ಅಮಾನತು ಮಾಡಲಾಗಿದೆ.
ಡ್ರಮ್ಮಾನ್ ಖದುರಿಯನ್ ಪಂಚಾಯತ್ನಲ್ಲಿರುವ ಸರಕಾರಿ ಶಾಲೆಯ 4ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರಲ್ಲಿ ಓರ್ವ ವಿದ್ಯಾರ್ಥಿನಿ ಹಣೆಯಲ್ಲಿ ತಿಲಕ ಧರಿಸಿದ್ದರೆ, ಇನ್ನೋರ್ವ ವಿದ್ಯಾರ್ಥಿನಿ ಹಿಜಾಬ್ ಧರಿಸಿದ್ದಳು. ಈ ಹಿನ್ನೆಲೆಯಲ್ಲಿ ಅಧ್ಯಾಪಕ ನಿಸಾರ್ ಅಹ್ಮದ್ ಅವರಿಗೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಧ್ಯಾಪಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ, ವಿದ್ಯಾರ್ಥಿನಿಯರಿಗೆ ಥಳಿಸಿರುವುದಕ್ಕೆ ಯಾವುದೇ ಕೋಮು ಆಯಾಮ ಇದುವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂ ಹಾಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿಯರ ಹೆತ್ತವರು ಜಂಟಿಯಾಗಿ ಈ ಘಟನೆಯ ವೀಡಿಯೊ ದಾಖಲು ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಈ ವೀಡಿಯೊದ ಆಧಾರದಲ್ಲಿ ರಾಜೌರಿಯ ಜಿಲ್ಲಾಡಳಿತ ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದೆ. ಅಲ್ಲದೆ, ಅಧ್ಯಾಪಕನನ್ನು ಅಮಾನತಿನಲ್ಲಿರಿಸಿದೆ.