‘‘ಬಿಜೆಪಿ ಸೇರ್ಪಡೆ ಬಗ್ಗೆ ಯಾರು ಪ್ರಚಾರ ಮಾಡುತ್ತಾರೆಂಬುದು ಗೊತ್ತಿಲ್ಲ’'
ಸಿಎಂ ಬೊಮ್ಮಾಯಿ ಭೇಟಿಯಾದ ಪ್ರಮೋದ್ ಮಧ್ವರಾಜ್

ಉಡುಪಿ : ಬಿಜೆಪಿ ಸೇರ್ಪಡೆಗೊಳ್ಳುವ ಸುದ್ದಿಯ ಮಧ್ಯೆಯೇ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ಬೆಳ್ಳಂಬೆಳಗ್ಗೆ ಮುಖ್ಯಮಂತ್ರಿ ತಂಗಿದ್ದ ಮಣಿಪಾಲದ ಖಾಸಗಿ ಹೊಟೇಲಿಗೆ ಆಗಮಿಸಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು.
ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ ಬಳಿಕ ಹೊರಬಂದ ಪ್ರಮೋದ್ ಮಧ್ವರಾಜ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಎ.11ರಂದು ಉಚ್ಚಿಲದಲ್ಲಿ ಮುಖ್ಯಮಂತ್ರಿಗಳು ಮೀನುಗಾರರಿಗೆ ಬಹಳಷ್ಟು ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ. ಆದರೆ ಉತ್ತರ ಕರ್ನಾಟಕ ಭಾಗದ ತಲವಾರು ಸಮಾಜದ ಮೀನುಗಾರರನ್ನು ಕೇಂದ್ರ ಸರಕಾರ ಎಸ್ಟಿ ಎಂಬುದಾಗಿ ಗಜೆಟ್ ನೋಟೀಫಿ ಕೇಶನ್ ಮಾಡಿದರೂ ಅವರಿಗೆ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಇದರಿಂದ ಅವರಿಗೆ ಬಹಳ ಅನ್ಯಾಯವಾಗುತ್ತಿದೆ. ಈ ವಿಚಾರವನ್ನು ನಿನ್ನೆ ಮುಖ್ಯಮಂತ್ರಿ ಜೊತೆ ಪ್ರಸ್ತಾಪ ಮಾಡಿದ್ದೆ. ಅದಕ್ಕೆ ಅವರು ಇಂದು ಅದರ ಬಗ್ಗೆ ಮಾತುಕತೆಗೆ ನಡೆಸಲು ಕರೆಸಿದ್ದರು. ಅದರಂತೆ ಬಂದು ಅವರ ಜೊತೆ ಚರ್ಚಿಸಿ ಮನವಿ ಸಲ್ಲಿಸಿದ್ದೇನೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಅವರು ನೀಡಿದ್ದಾರೆ ಎಂದರು.
ಬಿಜೆಪಿ ಸೇರ್ಪಡೆ ಬಗ್ಗೆ ಯಾರು ಮೂಹುರ್ತ ನಿಗದಿ ಮಾಡುತ್ತಿದ್ದಾರೆ ಮತ್ತು ಅದನ್ನು ಯಾರು ಪ್ರಚಾರ ಮಾಡುತ್ತಾರೆಂಬುದು ನನಗೆ ಗೊತ್ತಿಲ್ಲ. ಸದ್ಯಕ್ಕೆ ನನ್ನನ್ನು ಕೆಪಿಸಿಸಿ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಮುಂದೆ ಏನು ಆಗುತ್ತದೆ ಎಂಬುದು ನೋಡಬೇಕು. ಹುದ್ದೆ ನೀಡಿದ್ದಾರೆ ಮುಂದೆ ಜವಾಬ್ದಾರಿ ಕೊಡುತ್ತಾರೆ. ವಿಮಾನ ನಿಲ್ದಾಣಗಳಲ್ಲಿ ಬಿಜೆಪಿ ಹಿರಿಯ ಮುಖಂಡರು ಸೇರಿದಂತೆ ಎಲ್ಲ ಪಕ್ಷದವರು ಸಿಗುತ್ತಾರೆ. ಅಲ್ಲಿ ಅನೋನ್ಯವಾಗಿ ಮಾತನಾಡುತ್ತಾರೆ. ಅದರಲ್ಲಿ ಏನು ತಪ್ಪು ಎಂದು ಅವರು ಹೇಳಿದರು.