ಮಧ್ಯಪ್ರದೇಶದಲ್ಲಿ ಹಿಂಸಾಚಾರ ಆರೋಪಿಗಳ ಆಸ್ತಿ ನೆಲಸಮ: ಮುಖ್ಯಮಂತ್ರಿ ಚೌಹಾಣ್ ಈಗ ‘ಬುಲ್ಡೋಝರ್ ಮಾಮಾ’
Thewire.in ವರದಿ

ಹೊಸದಿಲ್ಲಿ, ಎ.12: ರಾಮನವಮಿ ಸಂದರ್ಭದಲ್ಲಿ ಮಧ್ಯಪ್ರದೇಶದ ಖರಗೋನ್ನಲ್ಲಿ ಸಂಭವಿಸಿದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಶಂಕಿತರಿಗೆ ಸೇರಿದ ಹಲವಾರು ಆಸ್ತಿಗಳನ್ನು ಸ್ಥಳೀಯಾಡಳಿತವು ನೆಲಸಮಗೊಳಿಸಿದ್ದು, ಇದು ಈ ಕ್ರಮದ ಕಾನೂನುಬದ್ಧತೆ ಮತ್ತು ಈ ಕಾರ್ಯಾಚರಣೆಯಿಂದ ತೊಂದರೆಯಾಗಿರುವುದು ಯಾರಿಗೆ ಎನ್ನುವುದರ ಕುರಿತು ಪ್ರಶ್ನೆಗಳನ್ನು ಸೃಷ್ಟಿಸಿದೆ.
ಎ.10ರಂದು ಖರಗೋನ್ನಲ್ಲಿ ರಾಮನವಮಿ ಮೆರವಣಿಗೆಗಳ ಸಂದರ್ಭದಲ್ಲಿ ಮೂರು ಕಡೆಗಳಲ್ಲಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿದ್ದವು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 80 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಬುಲ್ಡೋಝರ್ಗಳು ಅಂಗಡಿಗಳು ಮತ್ತು ಕಟ್ಟಡಗಳಿಗೆ ನುಗ್ಗುತ್ತಿರುವ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನೆಲಸಮಗೊಂಡಿರುವ ಹೆಚ್ಚಿನ ಕಟ್ಟಡಗಳು ಮುಸ್ಲಿಮರಿಗೆ ಸೇರಿದ್ದು ಎನ್ನಲಾಗಿದೆ.
45 ಮನೆಗಳು ಮತ್ತು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ ಎಂದು ಇಂದೋರ ವಿಭಾಗಾಧಿಕಾರಿ ಪವನ ಶರ್ಮಾ ಹೇಳಿದ್ದರೆ, 50 ಆಸ್ತಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ನೆಲಸಮಗೊಂಡಿರುವ ಕಟ್ಟಡಗಳ ನಿಜವಾದ ಸಂಖ್ಯೆ ಇನ್ನೂ ಹೆಚ್ಚಿರಬಹುದು.
ಎಲ್ಲರೂ ಅಲ್ಲ,ಆದರೆ ಕೆಲವು ಆರೋಪಿಗಳು ಕೋಮುದಂಗೆಗಳಲ್ಲಿ ಭಾಗಿಯಾಗಿದ್ದರು. ಇವರೆಲ್ಲ ಈ ಆಸ್ತಿಗಳ ಮಾಲಿಕರಾಗಿದ್ದು,ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿಕೊಂಡಿದ್ದರು. ಹೀಗಾಗಿ ಈ ಕ್ರಮ ಅಗತ್ಯವಾಗಿತ್ತು ಮತ್ತು ಕಂದಾಯ ದಾಖಲೆಗಳ ಆಧಾರದಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಶರ್ಮಾ ಸುದ್ದಿಸಂಸ್ಥೆಗೆ ತಿಳಿಸಿದರು.
ಇಂತಹ ನೆಲಸಮ ಕಾರ್ಯಾಚರಣೆಗೆ ನ್ಯಾಯಾಲಯದ ಆದೇಶವಿದ್ದಿರದ ಹಿನ್ನೆಲೆಯಲ್ಲಿ ಶರ್ಮಾ,ಕಟ್ಟಡ ಕಾನೂನುಬಾಹಿರವಾಗಿದ್ದರೆ ಸಂಬಂಧಿಸಿದ ಕಲಮ್ಗಳಡಿ ನಾವು ಕ್ರಮವನ್ನು ಕೈಗೊಳ್ಳಬಹುದು ಎಂದು ಹೇಳುವ ಮೂಲಕ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಹಣಕಾಸು ನಷ್ಟದ ಭೀತಿಯನ್ನು ಹುಟ್ಟುಹಾಕುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ ಎಂದೂ ಅವರು ತಿಳಿಸಿದರು.
ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಎ.10ರಂದು ರಾತ್ರಿ ಮತ್ತು ಎ.11ರಂದು ಹೊಸದಾಗಿ ಹಿಂಸಾಚಾರಗಳು ನಡೆದಿರುವ ವರದಿಗಳ ನಡುವೆಯೇ ‘ಭೀತಿಯನ್ನು ಹುಟ್ಟುಹಾಕುವ’ ಪೊಲೀಸರ ಕಾರ್ಯಾಚರಣೆ ನಡೆದಿದೆ. ಎ.11ರಂದು ಬೆಳಗಿನ ಜಾವ ಸಮವಸ್ತ್ರದಲ್ಲಿದ್ದ ಪುರುಷರ ಗುಂಪು ಮನೆ ಮತ್ತು ಪಕ್ಕದ ದೇವಸ್ಥಾನಕ್ಕೆ ನುಗ್ಗಿದ್ದು,ಈ ವೇಳೆ ವೃದ್ಧೆಯೋರ್ವರು ಗಾಯಗೊಂಡಿದ್ದಾರೆ.
ಖರಗೋನ್-ಖಾಂಡ್ವಾ ರಸ್ತೆಯಲ್ಲಿ ಹಿಂದುತ್ವ ಗುಂಪು ಮುಸ್ಲಿಂ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ ಬಳಿಕ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಮಧ್ಯಪ್ರದೇಶ ಆಡಳಿತವು ನಡೆಸುತ್ತಿರುವ ವಿಶಿಷ್ಟ ನೆಲಸಮ ಕಾರ್ಯಾಚರಣೆಯು ಇಂತಹ ವಿಧಾನಗಳ ಮೂಲಕ ನ್ಯಾಯವನ್ನು ಖಚಿತಪಡಿಸುವ ಶಿವರಾಜ್ ಸಿಂಗ್ ಚೌಹಾಣ್ ಅವರ ಉದ್ದೇಶಿತ ಗುರಿಯ ಇತ್ತೀಚಿನ ವಿದ್ಯಮಾನವಾಗಿದೆ.
ಉತ್ತರ ಪ್ರದೇಶದ ಆದಿತ್ಯನಾಥ ಸರಕಾರವು ಮಾಡಿರುವಂತೆ ಮಧ್ಯಪ್ರದೇಶ ಸರಕಾರವೂ ಕಳೆದ ವರ್ಷ ‘ಪ್ರತಿಭಟನಾಕಾರರಿಂದ ಆಸ್ತಿ ನಷ್ಟವನ್ನು ಭರಿಸಿಕೊಳ್ಳಲು’ ಕಠಿಣ ಕಾನೂನನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಿತ್ತು. ಈ ಕಾನೂನಿನ ಮೂಲಕ ನ್ಯಾಯಾಧಿಕರಣಗಳು ವರದಿಯಾಗಿರುವ ಹಾನಿಯ ಎರಡು ಪಟ್ಟು ಮೊತ್ತವನ್ನು ವಸೂಲು ಮಾಡಬಹುದು. ಈ ವರ್ಷದ ಆರಂಭದಿಂದ ಖುದ್ದು ಮುಖ್ಯಮಂತ್ರಿ ಚೌಹಾಣರೇ ಬುಲ್ಡೋಝರ್ ಅಭಿಯಾನದ ಬಗ್ಗೆ ಆಗಾಗ್ಗೆ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ.
ಎರಡು ಸಮುದಾಯಗಳ ನಡುವೆ ಘರ್ಷಣೆಯಲ್ಲಿ ಯುವಕನೋರ್ವ ಮೃತಪಟ್ಟಿದ್ದ ರಾಯ್ಸೇನ್ಗೆ ಮಾ.22ರಂದು ಭೇಟಿ ನೀಡಿದ್ದ ಸಂದರ್ಭ ಚೌಹಾಣ್ ತನ್ನತ್ತ ಬೆಟ್ಟು ಮಾಡಿಕೊಂಡು ‘ಮಾಮಾನ ಬುಲ್ಡೋಝರ್ಗಳು ಸಿದ್ಧವಾಗಿವೆ ಮತ್ತು ತಪ್ಪಿತಸ್ಥರನ್ನು ಸಂಪೂರ್ಣವಾಗಿ ನಾಶಮಾಡುವವರೆಗೆ ಅವು ನಿಲ್ಲುವುದಿಲ್ಲ ’ಎಂದು ಘೋಷಿಸಿದ್ದರು.
ಯುವಕನ ಸಾವಿಗೆ ಕಾರಣವಾಗಿದ್ದ ದಂಗೆಗಳನ್ನು ಪ್ರಚೋದಿಸಿದ್ದವರ ಮನೆಗಳ ನೆಲಸಮಕ್ಕೆ ಅವರು ಆದೇಶಿಸಿದ್ದರು. ಅದೇ ದಿನ ಶೇವೊಪುರದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ ಆರೋಪಿಗಳಾಗಿರುವ ಮೂವರು ಮುಸ್ಲಿಮ್ ವ್ಯಕ್ತಿಗಳ ಮನೆಗಳನ್ನು ನೆಲಸಮಗೊಳಿಸಲಾಗಿತ್ತು. ಮನೆಗಳನ್ನು ಸರಕಾರಿ ಜಾಗವನ್ನು ಅತಿಕ್ರಮಿಸಿ ನಿರ್ಮಿಸಲಾಗಿತ್ತು ಎಂದು ಸರಕರವು ಹೇಳಿಕೊಂಡಿತ್ತು.
ಚೌಹಾಣ್ ಮಾತುಮಾತಿಗೆ ಬುಲ್ಡೋಝರ್ ನ್ಯಾಯವನ್ನು ಉಲ್ಲೇಖಿಸುತ್ತಿರುವುದರಿಂದ ಅವರನ್ನೀಗ ‘ಬುಲ್ಡೋಝರ್ ಮಾಮಾ’ ಎಂದೇ ಕರೆಯಲಾಗುತ್ತಿದೆ. ಇದು ಉ.ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಅವರ ಬೆಂಬಲಿಗರು ನೀಡಿರುವ ‘ಬುಲ್ಡೋಝರ್ ಬಾಬಾ’ ಬಿರುದಿನಿಂದ ಪ್ರೇರಿತಗೊಂಡಿರುವಂತಿದೆ.
ರಾಮನವಮಿ ಹಿಂಸಾಚಾರದ ಮರುದಿನ ಎ.11ರಂದು ಚೌಹಾಣ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವ ವೀಡಿಯೊವನ್ನು ಅವರ ಸಾಮಾಜಿಕ ಜಾಲತಾಣ ಹ್ಯಾಂಡಲ್ಗಳು ಪೋಸ್ಟ್ ಮಾಡಿವೆ. ವೀಡಿಯೊದಲ್ಲಿ ‘ನಮ್ಮ ತಾಯಂದಿರು ಅಥವಾ ಸೋದರಿಯರನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ ಈ ಮಾಮಾ ಅವರನ್ನು ಜೈಲಿಗೆ ಕಳುಹಿಸುತ್ತಾನೆ. ಅವರ ಅಂಗಡಿ,ಮನೆ ಯಾವುದೂ ಉಳಿಯುವುದಿಲ್ಲ’ ಎಂದು ಜನರಿಗೆ ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣಗಳ ವಿಚರಣೆ ಆರಂಭಗೊಳ್ಳುವ ಮುನ್ನವೇ ಸರಕಾರವು ಆಸ್ತಿಗಳನು ಧ್ವಂಸಗೊಳಿಸಲು ಹೇಗೆ ಸಾಧ್ಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಪ್ರಶ್ನಿಸಿದ್ದಾರೆ. ಇಂತಹ ದಂಡನೀಯ ಕ್ರಮವನ್ನು ಕೈಗೊಳ್ಳಲು ಸರಕಾರಕ್ಕೆ ಹಕ್ಕು ಇದೆಯೇ ಎಂದೂ ಹಲವರು ಪ್ರಶ್ನಿಸಿದ್ದಾರೆ.