ಮಂಗಳೂರು | ಕ್ರೈಸ್ತರಿಂದ ಗುಡ್ ಫ್ರೈಡೇ ಆಚರಣೆ

ಮಂಗಳೂರು, ಎ.15: ಯೇಸು ಕ್ರಿಸ್ತರು ಶಿಲುಬೆಗೇರಿದ ಸ್ಮರಣಾರ್ಥ ಆಚರಿಸಲಾಗುವ 'ಶುಭ ಶುಕ್ರವಾರ'(ಗುಡ್ ಫ್ರೈಡೇ)ವನ್ನು ಇಂದು ನಗರದ ಎಲ್ಲಾ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆಯೊಂದಿಗೆ ಆಚರಿಸಲಾಗುತ್ತಿದೆ. ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ, ಶಿಲುಬೆಯ ಆರಾಧನೆ ಮತ್ತಿತರ ಕಾರ್ಯಕ್ರಮಗಳು ಬೆಳಗ್ಗೆಯಿಂದ ಆರಂಭಗೊಂಡಿದೆ.
ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಮೊದಲ್ಗೊಂಡು ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ 'ಶಿಲುಬೆಯ ಹಾದಿ' (ವೇ ಆಫ್ ದಿ ಕ್ರಾಸ್) ಪ್ರಮುಖ ಕಾರ್ಯಕ್ರಮವಾಗಿದೆ. ಮಂಗಳೂರಿನ ಮಿಲಾಗ್ರಿಸ್ ಚರ್ಚ್‌ನಲ್ಲಿ ಬೆಳಗ್ಗೆ ನಡೆದ ಶಿಲುಬೆಯ ಹಾದಿ ಕಾರ್ಯಕ್ರಮದಲ್ಲಿ ನೂರಾರು ಕ್ರೈಸ್ತರು ಭಾಗವಹಿಸಿದರು.