ರತ್ನಗಿರಿ ಆಳಸಮುದ್ರದಲ್ಲಿ ಮಲ್ಪೆಯ ಬೋಟ್ ಮುಳುಗಡೆ: ಏಳು ಮೀನುಗಾರರ ರಕ್ಷಣೆ

ಉಡುಪಿ : ಮಹಾರಾಷ್ಟ್ರ ರತ್ನಗಿರಿಯ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮಲ್ಪೆಯ ಬೋಟೊಂದು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದು, ಅದರಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಕಡೆಕಾರು ಪಡುಕೆರೆಯ ಭಗವಾನ್ ದಾಸ್ ಕೋಟ್ಯಾನ್ ಎಂಬವರ ದಿವ್ಯಾ ಶಕ್ತಿ ಬೋಟು ಏಳು ಜನ ಮೀನುಗಾರರೊಂದಿಗೆ ಎ.10ರಂದು ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆ ಹೊರಟಿದ್ದು, ಎ.13ರಂದು ರಾತ್ರಿ 9.30ರ ಸುಮಾರಿಗೆ ಮಹಾರಾಷ್ಟ್ರ ರಾಜ್ಯದ ರತ್ನಗಿರಿಯ ಆಳ ಸಮುದ್ರದಲ್ಲಿ ಇವರು ಮೀನುಗಾರಿಕೆ ಮಾಡುತ್ತಿದ್ದರು.
ಈ ಸಂದರ್ಭ ತೇಲುವ ಗಟ್ಟಿಯಾದ ವಸ್ತುವೊಂದು ಬೋಟಿನ ತಳಭಾಗಕ್ಕೆ ತಾಗಿತ್ತೆನ್ನಲಾಗಿದೆ. ಇದರಿಂದ ಬೋಟಿನ ತಳಭಾಗ ಒಡೆದು ನೀರು ಒಳ ಬರಲು ಆರಂಭಿಸಿತು. ತಕ್ಷಣ ಈ ಬೋಟಿನ ಮೀನುಗಾರರು, ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ನಿಲಾದ್ರಿ ಹಾಗೂ ಸುವರ್ಣ ಛಾಯ ಬೋಟಿನವರಿಗೆ ಮಾಹಿತಿ ನೀಡಲಾಯಿತು.
ಸ್ಥಳಕ್ಕೆ ಆಗಮಿಸಿದ ಈ ಎರಡು ಬೋಟಿನವರು ಮುಳುಗಡೆ ಆಗುತ್ತಿದ್ದ ಬೋಟಿನಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಿಸಿದರು. ಬಳಿಕ ದಿವ್ಯಾಶಕ್ತಿ ಸಮುದ್ರ ಮಧ್ಯೆ ಮುಳುಗಡೆ ಗೊಂಡಿತು ಎಂದು ಎ.17ರಂದು ಮಲ್ಪೆಯ ಕರಾವಳಿ ಕವಾಲು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ರಕ್ಷಿಸಿದ ಮೀನುಗಾರರನ್ನು ಮಲ್ಪೆ ಬಂದರಿಗೆ ಕರೆತರಲಾಗಿದೆ.