ಮಠಗಳ ಅನುದಾನಕ್ಕೆ ಶೇ.30 ಕಮಿಷನ್ ಆರೋಪ ಸ್ಪಷ್ಟಪಡಿಸಿದರೆ ಸಮಗ್ರ ತನಿಖೆ: ಸಚಿವ ಕೋಟ

ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಮಠಗಳಿಗೆ ಬಿಡುಗಡೆಯಾಗುವ ಅನುದಾನ ಪಡೆಯಲು 30 ಪರ್ಸೆಂಟ್ ಕಮಿಷನ್ ನೀಡಬೇಕಾಗಿದೆ ಎಂಬ ದಿಂಗಾಲೇಶ್ವರ ಸ್ವಾಮೀಜಿಯ ಆರೋಪದಿಂದ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಆದುದರಿಂದ ಸ್ವಾಮೀಜಿ, ನಿರ್ಧಿಷ್ಟವಾಗಿ ಯಾವ ವಿಚಾರ, ಕಾಮಗಾರಿ, ಮಠ ಹಾಗೂ ಇಲಾಖೆ ಎಂಬುದಾಗಿ ಸ್ಪಷ್ಟಪಡಿಸಿದರೆ ಸಮಗ್ರವಾಗಿ ತನಿಖೆ ನಡೆಸಿ, ನಿರ್ದಾಕ್ಷಿಣ್ಯ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಈ ವರ್ಷದ ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳ ಆದೇಶದಂತೆ ಹಣಕಾಸು ಮತ್ತು ನಮ್ಮ ಇಲಾಖೆಯಿಂದ ರಾಜ್ಯದ 12 ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು 53 ಹಿಂದುಳಿದ ವರ್ಗಗಳು ಸೇರಿದಂತೆ ಒಟ್ಟು 65 ಮಠಗಳಿಗೆ 119ಕೋಟಿ ರೂ. ಅನುದಾನವಾಗಿದೆ. ಆದರೆ ಅದರಲ್ಲಿ ಒಂದು ನಯಾ ಪೈಸೆ ಕೂಡ ಬಿಡುಗಡೆ ಆಗಿಲ್ಲ. ಆ ಹಣ ಬಿಡುಗಡೆ ಯಾಗಬೇಕಾದರೆ ಸಂಬಂಧಪಟ್ಟ ಅಧಿಕಾರಿಗಳು ಮಠಗಳಿಂದ ದಾಖಲೆಗಳನ್ನು ಪಡೆದುಕೊಂಡು ಯೋಜನಾ ವರದಿ ತಯಾರಿಸಬೇಕಾಗಿದೆ ಎಂದರು.
ನನ್ನ ಎರಡು ಇಲಾಖೆಗಳು ಅತ್ಯಂತ ಪಾರಾದರ್ಶಕವಾಗಿರಬೇಕು ಮತ್ತು ಬಡವರ ಪರವಾಗಿರಬೇಕೆಂಬ ಉದ್ದೇಶದಿಂದ ನಾನು ಕೆಲಸ ಮಾಡುತ್ತಿದ್ದೇನೆ. ಅಲ್ಲದೆ ನಮ್ಮ ಇಲಾಖೆಗಳಲ್ಲಿ ಭ್ರಷ್ಟಾಚಾರ ಶೂನ್ಯಕ್ಕೆ ಬರಬೇಕು ಎಂದು ಶ್ರಮಿ ಸುತ್ತಿದ್ದೇನೆ. ಆದುದರಿಂದ ಯಾವುದೇ ನಿರ್ದಿಷ್ಟ ಆರೋಪಗಳಿದ್ದರೆ ಹೇಳಲಿ. ಮಂತ್ರಿಯಾದ ನನ್ನನ್ನು ಸೇರಿಸಿ ತನಿಖೆ ಒಳಪಡಿಸುತ್ತೇನೆ ಎಂದು ಸಚಿವ ಕೋಟ ತಿಳಿಸಿದರು.
ಸ್ವಾಮೀಜಿ ಆರೋಪ ಮಾಡಿರುವುದು ನೀವು ನಿರ್ವಹಿಸುವ ಸಮಾಜ ಕಲಾಣ್ಯ ಇಲಾಖೆಯೇ, ಹಿಂದುಳಿದ ವರ್ಗಗಳ ಇಲಾಖೆಯೇ ಅಥವಾ ಈ ಹಿಂದೆ ಕೆಲಸ ಮಾಡಿರುವ ಮುಜರಾಯಿ ಇಲಾಖೆಯೇ ಎಂಬ ಪಶ್ನೆಗೆ ಉತ್ತರಿಸಿದ ಅವರು, ಅದು ನನಗೆ ಗೊತ್ತಿಲ್ಲ. ಅದಕ್ಕಾಗಿ ಸ್ವಾಮೀಜಿ ಅವರಲ್ಲಿ ಸ್ಪಷ್ಟಪಡಿಸುವಂತೆ ಕೇಳುತ್ತಿದ್ದೇನೆ ಎಂದು ಹೇಳಿದರು.
ಗುತ್ತಿಗೆದಾರರ ಸಂಘ ಕಮಿಷನ್ ಕುರಿತು ಪ್ರಧಾನಿಗೆ ಪತ್ರ ಬರೆದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಈ ಕುರಿತು ತನಿಖೆಗೆ ಮುಖ್ಯಮಂತ್ರಿ ಗಳು ಆದೇಶ ಮಾಡಿದ್ದಾರೆ. ತನಿಖೆಯಲ್ಲಿ ತಪ್ಪಿತಸ್ಥರೆಂಬುದು ಕಂಡುಬಂದರೆ ಕ್ರಮ ತೆಗೆದುಕೊಳ್ಳುತ್ತಾರೆ. ಸರಕಾರ ಮತ್ತು ಪಕ್ಷ ಇರಿಸು ಮುರಿಸು ಅನುಭವಿಸಬಾರದು ಎಂಬ ಕಾರಣಕ್ಕೆ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಮುಂದೆ ತನಿಖೆ ಆಗುತ್ತದೆ. ಅದರಂತೆ ಕ್ರಮ ತೆಗೆದು ಕೊಳ್ಳಲಾಗುತ್ತದೆ ಎಂದರು.
50 ಮಂದಿ ಸ್ವಾಮೀಜಿಗಳೇ ಚುನಾವಣಾ ಕಣಕ್ಕೆ ಇಳಿಯುತ್ತೇವೆ ಎಂಬ ಬ್ರಹ್ಮಾನಂದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಸಾಧು ಸಂತರ ಮಾತಿಗಳಿಗೆ ಪ್ರತಿಕ್ರಿಯೆ ಕೊಡಬಾರದು. ನಮಗಿಂತ ದೊಡ್ಡವರ ಮಾತಿಗೆ ಉತ್ತರ ಕೊಡುವುದಿಲ್ಲ. ಅದರ ಬದಲು ಗಮನಿಸುತ್ತಿದ್ದೇವೆ. ಅವರ ಆಶೀರ್ವಾದ ನಮಗೆ ಇರಲಿ ಎಂದು ಹೇಳಿದರು.
ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಗುಪ್ತಚರ ಇಲಾಖೆಯ ವೈಫಲ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೋಮುಗಲಭೆ ಆಗುವ ಸಂಭವದ ಕುರಿತು ಮಾಹಿತಿ ಸಿಕ್ಕಿದ ಕೂಡಲೇ ಎಲ್ಲ ರೀತಿಯ ಬಂದೋಬಸ್ತ್ ಮಾಡಲಾಗುತ್ತದೆ. ಆದರೆ ಕಿಡಿಗೇಡಿಗಳು ಅದಕ್ಕಿಂತಲೂ ತೀಕ್ಷ್ಣವಾಗಿ ಕೆಲಸ ಮಾಡುತ್ತಾರೆ. ಅಂತಹ ಕೃತ್ಯಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಮ್ಮ ಗೃಹ ಮಂತ್ರಿ ಗಳು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಉತ್ತರ ಪ್ರದೇಶ ಮಾದರಿಯ ಗೃಹಸಚಿವರು ಬೇಕು ಎಂಬುದರ ಬಗ್ಗೆ, ನಮ್ಮ ಸರಕಾರ ಎಲ್ಲರ ಭಾವನೆವನ್ನು ಗಮನಿಸುತ್ತಿರುತ್ತಿದೆ. ಸರಿಯಾದ ದಿಕ್ಕಿನಲ್ಲಿ ನಮ್ಮ ಸರಕಾರ ಹೆಜ್ಜೆ ಇಡುತ್ತದೆ ಎಂದರು. ಸಂಪುಟ ವಿಸ್ತರಣೆ ಕುರಿತು ಮುಖ್ಯ ಮಂತ್ರಿಗಳು, ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರಾಷ್ಟ್ರೀಯ ನಾಯಕರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.
150 ಕ್ಕೂ ಅಧಿಕ ಸ್ಥಾನ ಗೆಲವು
ಇತ್ತೀಚೆಗೆ ನಡೆದ ಕಾರ್ಯಕಾರಿಣಿ ಸಭೆ ಸೇರಿದಂತೆ ಪಕ್ಷದ ಸಂಘಟನಾತ್ಮಕ ವ್ಯೂಹ, ಚುನಾವಣೆ ಎದುರಿಸುವ ರೀತಿಯಿಂದ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಿಗೆ ಜನಾದೇಶದ ಮೂಲಕವೇ ಉತ್ತರ ಕೊಡುತ್ತೇವೆ. ಮುಂದಿನ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುತ್ತೇವೆ ಎಂದು ಸಚಿವ ಕೋಟ ಹೇಳಿದರು.
ಹಾಗಾದರೆ ಕಾಂಗ್ರೆಸ್ ಮತ್ತು ಜೆಡಿಎಸ್ನವರು ಹೇಳುವ 150 ಸೀಟು ಯಾವುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದನ್ನು ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಲ್ಲಿಯೇ ಕೇಳಬೇಕು. ಬೇರೆ ರಾಜ್ಯ ಇರಬಹುದೇನೋ ಎಂಬುದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.