ಮಳಲಿ ಮಸೀದಿ ನವೀಕರಣಕ್ಕೆ ಅಡ್ಡಿ ಪ್ರಕರಣ | ಶಾಂತಿ ಕಾಪಾಡಲು ಸೂಕ್ತ ಬಂದೋಬಸ್ತ್: ಎನ್. ಶಶಿಕುಮಾರ್

ಮಂಗಳೂರು, ಎ.22: ನಗರದ ಹೊರವಲಯದ ಮಳಲಿ ಮಸೀದಿಯ ನವೀಕಕರಣದ ವೇಳೆ ಉಂಟಾಗಿರುವ ಗೊಂದಲ ಬಗೆಹರಿಯುವವರೆಗೆ, ಯಾವುದೇ ರೀತಿಯ ಅಹಿತಕರ ಘಟನೆ ಉಂಟಾಗದಂತೆ ಶಾಂತಿ ಕಾಪಾಡಲು ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಹಳೆಯ ಕಟ್ಟಡವನ್ನು ಕೆಡವಿದಾಗ ಅಲ್ಲಿ ಮರದ ರಚನೆಯೊಂದು ಕಂಡುಬಂದಿದೆ. ಇದು ನೋಡಲು ದೇವಸ್ಥಾನದಲ್ಲಿರುವಂತೆ ಇದೆ ಎಂದು ಹೇಳಿ ಕೆಡವದಂತೆ ಕೆಲವರು ಆಗ್ರಹಿಸಿ ಮಸೀದಿ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಇತ್ತಂಡಗಳ ಜತೆ ಮಾತನಾಡಿ ದಾಖಲೆಗಳ ಮೂಲಕ ಪರಿಶೀಲಿಸಿ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸುವುದಾಗಿ ಹೇಳಿದ್ದಾರೆ.
ಅಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದದಿಂದ ಬದುಕುತ್ತಿದ್ದು, ಅಲ್ಲಿನ ಪರಿಶೀಲನೆಯಲ್ಲಿ ಕಂಡುಬರುವ ಸತ್ಯಾಸತ್ಯತೆಗೆ ಬದ್ಧರಾಗಿರುವುವುದಾಗಿ ಸ್ಥಳೀಯರು ವಿಶ್ವಾಸ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ನಡೆಯುತ್ತಿದ್ದ ನವೀಕರಣ ಕಾರ್ಯವನ್ನು ಒಂದುವಾರ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ನೀಡಿರುವ ಸೂಚನೆಯಂತೆ ನಿಲ್ಲಿಸಲಾಗಿದೆ ಎಂದು ಎನ್. ಶಶಿಕುಮಾರ್ ತಿಳಿಸಿದ್ದಾರೆ.