ಹೆಚ್ಚುವರಿ ಪಂಚಾಯತ್ನಲ್ಲಿ ಕರ್ತವ್ಯ ನಿರ್ವಹಿಸದ ಆರೋಪ; ಮುಂಡ್ಕೂರು ಪಿಡಿಒ ಅಮಾನತು
ಆದೇಶ ಹಿಂಪಡೆಯಲು ಒತ್ತಾಯ

ಉಡುಪಿ : ಹೆಚ್ಚುವರಿಯಾಗಿ ನೀಡಲಾಗಿರುವ ಈದು ಗ್ರಾಪಂನಲ್ಲಿ ಸಮಪರ್ಕವಾಗಿ ಕರ್ತವ್ಯ ನಿರ್ವಹಿಸದೇ ನಿಯಮ ಉಲ್ಲಂಘಿಸಿರುವುದಾಗಿ ಆರೋಪಿಸಿ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಪಂನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿರಾಜ್ ಎಚ್. ಅವರನ್ನು ಅಮಾನತುಗೊಳಿಸಿ ಉಡುಪಿ ಜಿಪಂ ಸಿಇಓ ಡಾ.ನವೀನ್ ಭಟ್ ಆದೇಶ ಹೊರಡಿಸಿದ್ದಾರೆ.
ರವಿರಾಜ್ ಎಚ್. ಅವರಿಗೆ ಪ್ರಭಾರವಾಗಿ ವಹಿಸಿಕೊಡಲಾದ ಈದು ಗ್ರಾಪಂ ನಲ್ಲಿ ಸಮಪರ್ಕವಾಗಿ ಕರ್ತವ್ಯ ನಿರ್ವಹಿಸದೇ ಹಾಗೂ ಮೇಲಾಧಿಕಾರಿಯವರ ಆದೇಶವನ್ನು ಪಾಲನೆ ಮಾಡದೆ ಸರಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿ ಕರ್ನಾಟಕ ನಾಗರಿಕ ಸೇವಾ ನಿಯಮವನ್ನು ಉಲ್ಲಂಘಿಸಿರುವುದರಿಂದ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕ್ರಮಬದ್ಧ ಇಲಾಖಾ ವಿಚಾರಣೆ ಯನ್ನು ಕಾಯ್ದಿರಿಸಿ ಮುಂದಿನ ಆದೇಶದವರೆಗೆ ಅಮಾನತ್ತಿನರಿಸಿ ಆದೇಶ ಹೊರಡಿಸಿಲಾಗಿದೆ ಎಂದು ಡಾ.ನವೀನ್ ಭಟ್ ತಿಳಿಸಿದ್ದಾರೆ.
ಆದೇಶ ಹಿಂಪಡೆಯಲು ಒತ್ತಾಯ
ಪ್ರಾಮಾಣಿಕ ಪಿಡಿಓ ಅವರನ್ನು ಅಮಾನತುಗೊಳಿಸಿರುವ ಕ್ರಮವನ್ನು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮನೋಸ್ಥೈರ್ಯವನ್ನು ಹಾಳು ಮಾಡುವ ಈ ಅಮಾನತು ಆದೇಶವನ್ನು ಕೂಡಲೇ ಹಿಂಪಡೆದು ಪ್ರಾಮಾಣಿಕ ಪಿಡಿಒಗೆ ನ್ಯಾಯ ಒದಗಿಸಬೇಕು. ಈ ಆದೇಶ ಮುಂದುವರೆದಲ್ಲಿ ಎ.25ರ ಬೆಳಗ್ಗೆಯಿಂದ ಜಿಲ್ಲೆಯ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿ/ಲೆಕ್ಕ ಸಹಾಯಕರು/ನೌಕರರ ಸಹಯೋಗದೊಂದಿಗೆ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.