ಬೆಳ್ತಂಗಡಿ | ಆದಿವಾಸಿ ಮಹಿಳೆಗೆ ಹಲ್ಲೆ, ಅರೆಬೆತ್ತಲೆಗೊಳಿಸಿದ ಪ್ರಕರಣ; 9 ಮಂದಿ ವಿರುದ್ಧ ಪ್ರಕರಣ ದಾಖಲು
ಬಿಜೆಪಿ ಮುಖಂಡನ ನೇತೃತ್ವದ ತಂಡದಿಂದ ಕೃತ್ಯ

ಫೈಲ್ ಫೋಟೊ
ಬೆಳ್ತಂಗಡಿ : ಬುಡಕಟ್ಟು ಮಹಿಳೆಯೊಬ್ಬರ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ ಆರೋಪದಲ್ಲಿ ಬಿಜೆಪಿ ಎಸ್ಟಿ ಮೋರ್ಚದ ಜಿಲ್ಲಾಧ್ಯಕ್ಷ ಸಹಿತ ಒಂಭತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಗುರಿಪಳ್ಳ ಗ್ರಾಮದಲ್ಲಿ ಹಲವು ಮಂದಿ ಗ್ರಾಮಸ್ಥರ ಸಮ್ಮುಖದಲ್ಲೇ ಈ ಘಟನೆ ಎ.19ರಂದು ನಡೆದಿದೆ ಎನ್ನಲಾಗಿದೆ. ಎಲ್ಲ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.35 ವರ್ಷದ ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಗುಂಪೊಂದು ತನ್ನ ಬಟ್ಟೆ ಹರಿದು ಅರೆಬೆತ್ತಲು ಮಾಡಿ ವೀಡಿಯೊವನ್ನೂ ಚಿತ್ರೀಕರಿಸಿದೆ ಎಂದು ಮಹಿಳೆ ದೂರು ನೀಡಿದ್ದರು. ಅಕ್ಕ ಹಾಗೂ ತಾಯಿಯ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆಪಾದಿಸಲಾಗಿತ್ತು.
ಆರೋಪಿಗಳಾದ ಬಿಜೆಪಿ ಎಸ್ಟಿ ಮೋರ್ಚದ ಜಿಲ್ಲಾಧ್ಯಕ್ಷ ಚನ್ನಕೇಶವ (40) ಸಂದೀಪ್(30), ಸಂತೋಷ್(29), ಗುಲಾಬಿ(55), ಸುಗುಣಾ(30), ಕುಸುಮಾ(38), ಲೋಕಯ್ಯ (55), ಅನಿಲ್ (35) ಮತ್ತು ಲಲಿತಾ (40) ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರೆಲ್ಲರೂ ಸಂತ್ರಸ್ತೆಯ ಗ್ರಾಮದವರಾಗಿದ್ದಾರೆ.
ದೂರು ನೀಡಿದ ಮಹಿಳೆ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಅವರ ಅಕ್ಕ ವಾಸ್ತವ್ಯ ಇದ್ದ ಸರಕಾರಿ ಭೂಮಿಯನ್ನು ಅಳತೆ ಮಾಡಲು ಕಂದಾಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಧಿಕಾರಿಗಳ ಕಾರ್ಯಕ್ಕೆ ಆರೋಪಿಗಳು ಆಕ್ಷೇಪಿಸಿದರು ಎನ್ನಲಾಗಿದ್ದು, ಸರ್ವೆ ಮಾಡಲು ಬಂದ ಅಧಿಕಾರಿಗಳನ್ನು ಸ್ಥಳದಿಂದ ವಾಪಾಸು ಕಳುಹಿಸಿದ್ದರು.