ರೂರ್ಕಿ ಮಹಾಪಂಚಾಯತ್ ಸಂಘಟಕ ಸ್ವಾಮಿ ಆನಂದ್ ಸ್ವರೂಪ್ ಗೆ ಗೃಹಬಂಧನ

Photo: Twitter/@swamianandswaro
ರೂರ್ಕಿ, ಎ 27: ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಡಾಡಾ ಜಲಾಲ್ಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಹಾಗೂ ಕಲ್ಲು ತೂರಾಟದ ಬಗ್ಗೆ ಚರ್ಚೆ ನಡೆಸಲು ಮಹಾಪಂಚಾಯತ್ ಆಯೋಜಿಸಿದ್ದ ಸಂಘಟಕರಲ್ಲಿ ಓರ್ವರಾಗಿರುವ ಸ್ವಾಮಿ ಆನಂದ್ ಸ್ವರೂಪ್ ಅವರನ್ನು ಬುಧವಾರ ಗೃಹಬಂಧನದಲ್ಲಿ ಇರಿಸಲಾಗಿದೆ. ಅಲ್ಲದೆ, ಈ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರಿದ್ವಾರ ಜಿಲ್ಲಾಡಳಿತ ಗ್ರಾಮದ 5 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಸುಪ್ರೀಂ ಕೋರ್ಟ್ ಮಂಗಳವಾರ ಉತ್ತರಾಖಂಡ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ ಬಳಿಕ ಮಹಾಪಂಚಾಯತ್ ಗೆ ಯಾವುದೇ ಅನುಮತಿ ನೀಡಿಲ್ಲ ಎಂದು ಜಿಲ್ಲಾಡಳಿತ ಖಚಿತಪಡಿಸಿದೆ.
‘‘ಎಲ್ಲವೂ ನಿಯಂತ್ರಣದಲ್ಲಿದೆ. ಗ್ರಾಮದಲ್ಲಿ ಯಾವುದೇ ಮಹಾಪಂಚಾಯತ್ ನಡೆಸಲು ಅವಕಾಶ ಇಲ್ಲ. ಸಾಕಷ್ಟು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ 5ರಿಂದ 6 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಗ್ರಾಮಕ್ಕೆ ಬರುವ ಕೆಲವರನ್ನು ತಡೆಯಲಾಗಿದೆ’’ ಎಂದು ಹರಿದ್ವಾರದ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ (ಎಡಿಎಂ) ಬಿ.ಎಲ್. ಶಾ ಹೇಳಿದ್ದಾರೆ.
ಎಪ್ರಿಲ್ 16ರಂದು ರಾತ್ರಿ ಹನುಮಾನ್ ಜಯಂತಿ ಮೆರವಣಿಗೆಯ ಸಂದರ್ಭ ಡಾಡಾ ಜಲಾಲ್ಪುರ ಗ್ರಾಮದಲ್ಲಿ ಕೋಮು ಹಿಂಸಾಚಾರ ನಡೆದಿತ್ತು. ಈ ಸಂದರ್ಭ ಹಲವರು ಗಾಯಗೊಂಡಿದ್ದರು ಹಾಗೂ ಕನಿಷ್ಠ ನಾಲ್ಕು ವಾಹನಗಳು ಬೆಂಕಿಗಾಹುತಿಯಾಗಿದ್ದವು. ಹಿಂಸಾಚಾರಕ್ಕೆ ಸಂಬಂಧಿಸಿ ಇದುವರೆಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ 14 ಮಂದಿಯನ್ನು ಬಂಧಿಸಲಾಗಿದೆ. ಹರಿದ್ವಾರ ಮೂಲದ ಹಿಂದೂ ಸಂತ ಹಾಗೂ ಬುಧವಾರದ ಕಾರ್ಯಕ್ರಮದ ಸಂಘಟಕರಲ್ಲಿ ಓರ್ವರಾಗಿದ್ದ ಸ್ವರೂಪ್ ಅವರನ್ನು ರೂರ್ಕಿಯಲ್ಲಿರುವ ದಿನೇಶಾನಂದ ಮಹಾರಾಜ ಅವರ ಆಶ್ರಮದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ. ‘‘ಪೊಲೀಸರ ಕ್ರಮ ಹಾಗೂ ಪ್ರಧಾನ ಆರೋಪಿಗಳನ್ನು ಬಂಧಿಸುವಲ್ಲಿ ಅವರ ವಿಫಲತೆಯ ಕುರಿತು ಚರ್ಚೆ ನಡೆಸಲು ಈ ಹಿಂದೆ ಮಹಾಪಂಚಾಯತ್ ಘೋಷಿಸಲಾಗಿತ್ತು’’ ಎಂದು ಸ್ವರೂಪ್ ಹೇಳಿದ್ದಾರೆ.