ಸೌಹರ್ದತೆಯ ಪರಂಪರೆ ಮುಂದುವರಿಸುವುದು ಅಗತ್ಯ: ಪ್ರೊ.ಫಣಿರಾಜ್

ಉಡುಪಿ : ಹಿರಿಯರು ಕೂಡಿ ಪರಸ್ಪರ ಸೌಹರ್ದತೆಯೊಂದಿಗೆ ಬದುಕಿದ ಪರಂಪರೆ ಇದೆ. ಆ ಪರಂಪರೆ ಯನ್ನು ನಾವು ಮುಂದುವರಿಸಬೇಕೆಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಹೂಡೆ ಸಾಲಿಹಾತ್ ಸಭಾಂಗಣದಲ್ಲಿ ಆಯೋಜಿಸಲಾದ ಈದ್ ಸೌಹಾರ್ದಕೂಟವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇವತ್ತು ಅನ್ಯಾಯವಾದ ಸಂದರ್ಭದಲ್ಲಿ ಮಾತನಾಡುವವರು ನಾವಾಗಬೇಕು. ದೂರದ ಕಾಶ್ಮೀರ, ಕಾಬೂಲಿನಲ್ಲಿ ನಡೆಯುವ ಘಟನೆಗೆ ನಮ್ಮ ಊರಿನಲ್ಲಿ ನಮ್ಮೊಂದಿಗೆ ಬದುಕುವ ಮುಸ್ಲಿಮರ ಕುರಿತು ಅನುಮಾನ ವ್ಯಕ್ತಪಡಿಸು ವುದು ತಪ್ಪು. ಅವರ ಕುರಿತು ತಪ್ಪುಅಭಿಪ್ರಾಯ ವ್ಯಕ್ತಪಡಿಸಿದಾಗ ನಾವು ಅವರೊಂದಿಗೆ ನಿಲ್ಲಬೇಕಾದ ಅವಶ್ಯಕತೆಯಿದೆ ಎಂದು ಅವರು ತಿಳಿಸಿದರು.
ಇಸ್ಹಾಕ್ ಪುತ್ತೂರು ಮಾತನಾಡಿ, ದೇಶದ ಕುರಿತು ಕಳಕಳಿಯುಳ್ಳ ಪ್ರತಿ ಯೊಂದು ಜನರು ಪ್ರಸ್ತುತ ಪರಿಸ್ಥಿತಿ ನೋಡಿ ಆತಂಕಿತರಾಗಿದ್ದಾರೆ. ಸೌಹರ್ದತೆ ವಾತವರಣ ಕೆಡಿಸುವ ಪ್ರಯತ್ನವನ್ನು ಕೆಲವೊಂದು ಗುಂಪುಗಳು ಪ್ರಜ್ಞಾಪೂರ್ವಕ ವಾಗಿ ನಡೆಸುತ್ತಿದೆ. ಧರ್ಮ ರಕ್ಷಣೆ ಹೆಸರಿನಲ್ಲಿ ಪರಸ್ಪರ ದೂಷಣೆ, ಅಪನಂಬಿಕೆ ಹರಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಧರ್ಮದ ಮೌಲ್ಯವನ್ನು ವ್ಯಾಪಕ ಗೊಳಿಸುವ ಅವಶ್ಯಕತೆ ಅದರ ನೈಜ್ಯ ಅನುಯಾಯಿ ಗಳಲ್ಲಿ ಇದೆ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ರಘುರಾಮ್ ಶೆಟ್ಟಿ, ತೋನ್ಸೆ ಗ್ರಾಪಂ ಉಪಾಧ್ಯಕ್ಷ ಅರುಣ್ ಫೆರ್ನಾಂಡಿಸ್, ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸುನಂದ ಮಾತನಾಡಿದರು. ಅಧ್ಯಕ್ಷತೆಯನ್ನು ಅಬ್ದುಲ್ ಕಾದೀರ್ ಮೊಯ್ದಿನ್ ವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್ಐಓ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ, ಡಾ.ಫಹೀಮ್, ತೋನ್ಸೆ ಗ್ರಾಪಂ ಸದಸ್ಯರಾದ ಹೈದರ್, ವಿಜಯ್, ವತ್ಸಲ, ಕುಸುಮಾ, ಮಮ್ತಾಝ್, ಜಮೀಲಾ ಸದೀದಾ, ಸುಝನ, ಮಹೇಶ್ ಪೂಜಾರಿ, ಸಾಲಿಹಾತ್ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ ಉಪಸ್ಥಿತರಿದ್ದರು. ಇದ್ರೀಸ್ ಹೂಡೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.