ಮಂಗಳೂರು: ದಲಿತ ಸಂಘಟನೆಗಳಿಂದ ಹಕ್ಕೊತ್ತಾಯ ಚಳುವಳಿ

ಮಂಗಳೂರು : ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರರು ನಕಲಿ ದಾಖಲೆ ಸೃಷ್ಟಿಸಿ ಪರಿಶಿಷ್ಟ ಜಾತಿಯ ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಪ್ರಕರಣವನ್ನು ವಿರೋಧಿಸಿ ಮಂಗಳೂರು ತಾಲೂಕು ಮೊಗೇರ ಸಂಘದ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳಿಂದ ತಹಶೀಲ್ದಾರ್ ಕಚೇರಿ ಸಮೀಪ ಪ್ರತಿಭಟನೆ ನಡೆಯಿತು.
ಮಂಗಳೂರು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಂಗಳೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ ಕೊಂಚಾಡಿ, ಅಸ್ಪೃಶ್ಯ ಮೊಗೇರ ಜಾತಿಯವರಿಗೆ ನೀಡುತ್ತಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಇತರರಿಗೆ ಮತ್ತು ರಾಜ್ಯದ ಹಿಂದುಳಿದ ಜಾತಿ ಪಟ್ಟಿಯ ಪ್ರವರ್ಗ ೧ರ ಮೀನುಗಾರರ ಮೊಗೇರರಿಗೆ ನೀಡುತ್ತಿರುವುದು ಸಂವಿಧಾನ ಹಾಗೂ ದೇಶದ ಮೀಸಲಾತಿ ಕಾನೂನಿಗೆ ಮಾಡಿದ ದ್ರೋಹ ಎಂದು ಆಕ್ಷೇಪಿಸಿದರು.
ಅಸ್ಪೃಶ್ಯತೆಯಿಂದ ಬಳಲಿದ ಮೊಗೇರ ಜಾತಿಯವರಿಗೆ ಅನುಕೂಲವಾಗುವಂತೆ ೧೯೭೬ರಲ್ಲಿ ಸರಕಾರ ಆದೇಶ ಹೊರಡಿಸಿತ್ತು. ಆದರೆ ಈ ಮೊಗೇರ ಎಂಬ ಶಬ್ಧವನ್ನು ದುರುಪಯೋಗ ಪಡಿಸಿಕೊಂಡು ರಾಜಕೀಯ ದುರುದ್ದೇಶ ಹೊಂದಿದ ಮುಖಂಡರು ಉತ್ತರ ಕನ್ನಡದ ಭಟ್ಕಳ ತಾಲೂಕಿನಲ್ಲಿ ೧೯೭೭ರಲ್ಲಿ ಮೊದಲ ಬಾರಿಗೆ ಸುಳ್ಳು ದಾಖಲಾತಿ ನೀಡಿ ಸರಕಾರ ಹಾಗೂ ತಹಶೀಲ್ದಾರರಿಗೂ ದಿಕ್ಕು ತಪ್ಪಿಸಿ ಒತ್ತಡದ ನೀತಿ ಅನುಸರಿಸಿ ಮೀನುಗಾರ ಮೊಗೇರ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಸರಕಾರ ಸಾಮಾಜಿಕ ನ್ಯಾಯ ಎತ್ತಿ ಹಿಡಿದು ಅಸ್ಪೃಶ್ಯ ಮೊಗೇರರಿಗೆ ನೀಡುವ ಜಾತಿ ಮೀಸಲಾತಿಯನ್ನು ದಲಿತ ಸಮುದಾಯದವರಿಗೆ ಮಾತ್ರ ನೀಡಿ ೧೯೨೨ರಿಂದ ೨೦೧೦ರವರೆಗೆ ಸುಳ್ಳು ದಾಖಲೆ ನೀಡಿ ಮೋಸದಿಂದ ಪಡೆದಿರುವ ಪ್ರಮಾಣ ಪತ್ರಗಳನ್ನು ರದ್ದುಪಡಿಸಿ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಕಾನೂನು ಪ್ರಕಾರ ಕ್ರಮ ವಹಿಸಬೇಕೆಂದು ಅವರು ಆಗ್ರಹಿಸಿದರು.
ದ.ಕ. ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸಂಚಾಲಕ ಎಂ. ದೇವದಾಸ್ ಮಾತನಾಡಿ, ಮೀಸಲಾತಿ ದಲಿತರ ಹಕ್ಕು ವಿನಹ ಭಿಕ್ಷೆ ಅಲ್ಲ ಎಂದರು.
ಅಂಬೇಡ್ಕರ್‌ರವರು ೧೯೫೦ರಲ್ಲಿ ಸಂವಿಧಾನವನ್ನು ದೇಶಕ್ಕೆ ಸಮರ್ಪಣೆಯ ವೇಳೆ ದೇಶದಲ್ಲಿ ಸಾಮಾಜಿಕ, ಆರ್ಥಿಕ ಸಮಾನತೆ ನಿವಾರಣೆಯಾಗದೆ ಸಂವಿಧಾನ ಅರ್ಥಪೂರ್ಣವಾಗದು ಎಂದು ಹೇಳಿದ್ದರು. ಆದರೆ ಸಂವಿಧಾನ ರಚನೆಯಾಗಿ ೭೦ ವರ್ಷಗಳ ಬಳಿಕವೂ ಸಂವಿಧಾನದತ್ತವಾದ ಹಕ್ಕನ್ನು ಅರ್ಹರಿಂದ ಕಸಿಯುವ ಕಾರ್ಯ ನಡೆಯುತ್ತಲೇ ಸಾಗಿದೆ. ರಾಜ್ಯ ಸರಕಾರದಲ್ಲಿ ಸಚಿವರಾಗಿರುವವರೇ ತಮ್ಮ ಮಕ್ಕಳಿಗೆ ನಕಲಿ ಜಾತಿ ಪ್ರಮಾಣ ಪತ್ರ ಮಾಡಿಸಿ, ಅದನ್ನು ಉಪಯೋಗಿಸಿಲ್ಲ ಎಂದು ಹೇಳುವಂತಹ ಪರಿಸ್ಥಿತಿಯಲ್ಲಿ ನಾವಿರುವಾಗ ಈ ಬಗ್ಗೆ ದಲಿತರು ಎಚ್ಚೆತ್ತು ಹೋರಾಟ ನಡೆಸಬೇಕಾಗಿರುವುದು ಅನಿವಾರ್ಯ ಎಂದರು.
ಪ್ರತಿಭಟನಾಕಾರರನ್ನುದ್ದೇಶಿಸಿ ದಲಿತ ಮುಖಂಡರಾದ ಎಸ್.ಪಿ. ಆನಂದ, ಅಶೋಕ್ ಕೊಂಚಾಡಿ ಮೊದಲಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ನಾಯಕರಾದ ಗಿರಿಯಪ್ಪ ಎಸ್, ಹರೀಶ್ ಪಣಂಬೂರು, ನಾರಾಯಣ ಉಳ್ಲಾಲ್, ಸದಾನಂದ ಬೊಂದೇಲ್, ರಮೇಶ್ ಕೊಂಚಾಡಿ, ಜಗದೀಶ್ ಪಾಂಡೇಶ್ವರ, ಸುಧಾಕರ ಬೋಳೂರು, ರಮೇಶ್ ಕಾವೂರು, ರಾಕೇಶ್ ಕುಂದರ್, ಪ್ರೇಮ್ ಬಳ್ಳಾಲ್‌ಬಾಗ್, ರುಕ್ಮಯ್ಯ ಅಮೀನ್, ಗೀತಾ ಕರಂಬಾರು, ಪದ್ಮನಾಭ ನರಿಂಗಾನ, ಶಿವಾನಂದ ಬಳ್ಳಾಲ್‌ಬಾಗ್ ಭಾಗವಹಿಸಿದ್ದರು.
ಪ್ರತಿಭಟನೆಯ ಬಳಿಕ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಅಸ್ಪೃಶ್ಯ ಮೊಗೇರ ಜಾತಿಯವರಿಗೆ ನೀಡುತ್ತಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಇತರರು ಪಡೆದಿದ್ದು, ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ ೧೯೮೯ ಪ್ರಕಾರ ಕ್ರಿಮಿನಲ್ ಮೊಕದ್ದಮೆ ರೂಡಿ ಸರಕಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಮನವಿಯಲ್ಲಿ ರಾಜ್ಯಪಾಲರನ್ನು ಆಗ್ರಹಿಸಲಾಗಿದೆ.