ರಾಜಪಕ್ಸ ಎಸಗಿದ ರಾಜಕೀಯ ಪ್ರಮಾದವೇ ಅವರ ತಲೆದಂಡಕ್ಕೆ ಕಾರಣವಾಯಿತು: ರಾಜಕೀಯ ತಜ್ಞರು ಹೇಳಿದ್ದೇನು?
ಕೊಲಂಬೊ, ಮೇ 11: ಶ್ರೀಲಂಕಾದ ಪ್ರಧಾನಿಯಾಗಿದ್ದ ಮಹಿಂದಾ ರಾಜಪಕ್ಸ ಎಸಗಿದ ಒಂದು ರಾಜಕೀಯ ಮಹಾ ಪ್ರಮಾದ ದೇಶದ ರಾಜಕೀಯ ಸ್ಥಿತಿಗತಿಯ ಟರ್ನಿಂಗ್ ಪಾಯಿಂಟ್ ಆಗಿ ಮಾರ್ಪಟ್ಟು ಅವರ ತಲೆದಂಡಕ್ಕೆ ಕಾರಣವಾಯಿತು ಎಂದು ಕೊಲಂಬೊ ವಿವಿಯ ರಾಜಕೀಯ ವಿಜ್ಞಾನಿ ಜಯದೇವ ಉಯಾಂಗೊಡ ಹೇಳಿದ್ದಾರೆ.
ಸೋಮವಾರ ಮಹಿಂದಾ ನೇತೃತ್ವದಲ್ಲಿ ನಡೆದ ಬೆಂಬಲಿಗರ ಸಭೆ ಪರಿಸ್ಥಿತಿಯನ್ನು ಬದಲಾಯಿಸಿತು. ರಾಜಪಕ್ಸ ಮತ್ತವರ ಬೆಂಬಲಿಗರ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಯಿತು. ಮಹಿಂದಾ ರಾಜಪಕ್ಸ ತನ್ನ ರಾಜಕೀಯ ಬದುಕಿನಲ್ಲಿ ಎಸಗಿದ ಮಹಾ ಪ್ರಮಾದ ಇದು ಎಂಬುದು ಸ್ಪಷ್ಟವಾಗಿದೆ ಎಂದವರು ಹೇಳಿದ್ದಾರೆ.
ಸೋಮವಾರ ಕೊಲಂಬೊದಲ್ಲಿರುವ ಪ್ರಧಾನಿಯ ಸರಕಾರಿ ನಿವಾಸದಲ್ಲಿ ಮಹಿಂದ ರಾಜಪಕ್ಸ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಅವರ ಆಪ್ತರು, ಬೆಂಬಲಿಗರ ಸಹಿತ ಸುಮಾರು 1000 ಮಂದಿ ಭಾಗವಹಿಸಿದ್ದರು. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದೆಂದು ಬೆಂಬಲಿಗರು ಆಗ್ರಹಿಸಿದರು. ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನ (ಎಸ್ಎಲ್ಪಿಪಿ) ಪಕ್ಷದ ಆಶ್ರಯದಲ್ಲಿ ನಡೆದಿದ್ದ ಸಭೆಯ ಮುಖ್ಯ ಉದ್ದೇಶ ಮಹಿಂದಾರ ಸ್ಥಾನವನ್ನು ಭದ್ರಗೊಳಿಸುವುದಾಗಿತ್ತು. ಆದರೆ ಇದು ತಿರುಗುಬಾಣವಾಯಿತು. ಸಭೆಗೂ ಮುನ್ನ ರಾಜಪಕ್ಸ ಬೆಂಬಲಿಗರು ‘ಯಾರ ಆಡಳಿತ.. ಮಹಿಂದಾರ ಆಡಳಿತ’ ಎಂದು ಘೋಷಣೆ ಕೂಗುತ್ತಾ ಕೊಲಂಬೊದ ಬೀದಿಯಲ್ಲಿ ರ್ಯಾಲಿ ನಡೆಸಿ ಶಕ್ತಿಪ್ರದರ್ಶಿಸಿದರು.
ಬಳಿಕ ನಿವಾಸದ ಒಳಗೆ, ಸರಕಾರಿ ಕಾರ್ಯಕ್ರಮಕ್ಕೆ ನಿಗದಿಯಾದ ಸಭಾಂಗಣದಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಹಿಂದಾ ಮಾತನಾಡಿದರು. ಆರ್ಥಿಕ ಬಿಕ್ಕಟ್ಟಿನ ನೆಪದಲ್ಲಿ ವಿಪಕ್ಷಗಳು ತಮ್ಮ ರಾಜಕೀಯ ಅಜೆಂಡಾವನ್ನು ಮುಂದುವರಿಸಿರುವುದು ರಹಸ್ಯದ ವಿಷಯವಲ್ಲ. ಅವರಿಗೆ ಅಧಿಕಾರ ಮಾತ್ರ ಬೇಕು ಎಂದು ಹೇಳಿದ ಮಹಿಂದ, ನಾನು ರಾಜೀನಾಮೆ ನೀಡಬೇಕೆಂದು ಬಯಸುತ್ತೀರಾ ಎಂದು ಪ್ರಶ್ನಿಸಿದಾಗ ಬೆಂಬಲಿಗರು ‘ಇಲ್ಲ’ ಎಂದು ಕೂಗಿದರು. ಇದರರ್ಥ ನಾನು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದಲ್ಲವೇ. ರಾಜಕೀಯದಲ್ಲಿ ನಾನು ಯಾವತ್ತೂ ದೇಶದ, ಜನತೆಯ ಪರವಾಗಿದ್ದೆ ಎಂಬುದು ನಿಮಗೆಲ್ಲಾ ತಿಳಿದಿದೆ. ಜನತೆಯ ಪ್ರಯೋಜನಕ್ಕಾಗಿ ಯಾವುದೇ ತ್ಯಾಗಕ್ಕೂ ತಾನು ಸಿದ್ಧ ಎಂದು ಮಹಿಂದಾ ಹೇಳಿದರು. ಸರಕಾರದ ಮುಖ್ಯ ಸಚೇತಕ ಜಾನ್ಸ್ಟನ್ ಫೆರ್ನಾಂಡೊ ಮತ್ತಿತರ ಪ್ರಮುಖರೂ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸ್ವಲ್ಪ ಹೊತ್ತಿನ ಬಳಿಕ, ಸಭೆಯಲ್ಲಿದ್ದ ಅದೇ ಬೆಂಬಲಿಗರ ತಂಡ ನಗರದಾದ್ಯಂತ ದಾಂಧಲೆ ನಡೆಸಿತು. ಪ್ರತಿಭಟನಾ ಸ್ಥಳಕ್ಕೆ ನುಗ್ಗಿ, ಅಲ್ಲಿ ಹಾಕಿದ್ದ ಟೆಂಟ್ ಅನ್ನು ಕಿತ್ತೆಸೆದು ಪ್ರತಿಭಟನಾಕಾರರನ್ನು ದೊಣ್ಣೆ ಮತ್ತು ಬಡಿಗೆ ಮತ್ತು ಕಬ್ಬಿಣದ ರಾಡ್ನಿಂದ ಥಳಿಸಿತು. ಇದು ಅದುವರೆಗೆ ಶಾಂತರೀತಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಲು ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಮಹಿಂದಾ ಬೆಂಬಲಿಗರ ಕೃತ್ಯವು, ಸರಕಾರ ವಿರೋಧಿ ಪ್ರತಿಭಟನಾಕಾರರನ್ನು ಕೆರಳಿಸಿತು ಮತ್ತು ದೇಶದೆಲ್ಲೆಡೆ ಘರ್ಷಣೆ ವ್ಯಾಪಿಸಿತು. ರಾಜಪಕ್ಸ ಕುಟುಂಬಕ್ಕೆ ಸೇರಿದ ಮನೆ, ಆಸ್ತಿಪಾಸ್ತಿ ಧ್ವಂಸಗೊಳಿಸಲಾಯಿತು. ಘರ್ಷಣೆಯಲ್ಲಿ 8 ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡರು. ತೀವ್ರ ಒತ್ತಡಕ್ಕೆ ಮಣಿದ ಮಹಿಂದಾ ರಾಜಪಕ್ಸ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.