ಉತ್ತರ ಕೊರಿಯಾದಲ್ಲಿ 'ಮೊಟ್ಟಮೊದಲ ಕೋವಿಡ್-19' ಸೋಂಕು ದೃಢ!
ಪ್ಯಾಂಗ್ಯಾಂಗ್ (ಉತ್ತರ ಕೊರಿಯಾ): ಎರಡೂವರೆ ವರ್ಷ ಕಾಲ ಕೋವಿಡ್-19 ಸಾಂಕ್ರಾಮಿಕವನ್ನು ಹೊರಗಿಟ್ಟಿದ್ದ ಉತ್ತರ ಕೊರಿಯದಲ್ಲಿ ಮೊಟ್ಟಮೊದಲ ಕೋವಿಡ್-19 ಸೋಂಕು ಗುರುವಾರ ದೃಢಪಟ್ಟಿದ್ದು, "ತೀವ್ರ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಘಟನೆ" ಎಂದು ಸರ್ಕಾರಿ ಮಾಧ್ಯಮ ಇದನ್ನು ಘೋಷಿಸಿದೆ.
ಪ್ಯಾಂಗ್ಯಾಂಗ್ನಲ್ಲಿ ಜ್ವರಪೀಡಿತರಾಗಿದ್ದ ರೋಗಿಯಿಂದ ಸಂಗ್ರಹಿಸಿದ ರಕ್ತದ ಮಾದರಿಯಲ್ಲಿ ವ್ಯಾಪಕವಾಗಿ ಪ್ರಸರಣವಾಗುವ ಸಾಮರ್ಥ್ಯ ಹೊಂದಿದ ಒಮಿಕ್ರಾನ್ ಪ್ರಬೇಧದ ವೈರಸ್ ಪತ್ತೆಯಾಗಿದೆ ಎಂದು ಕೆಸಿಎನ್ಎ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಧ್ಯಕ್ಷ ಕಿಮ್ ಜಾಂಗ್ ಉನ್ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಸಂಘರ್ಷ ಸ್ಥಿತಿಯ ಪಾಲಿಟ್ಬ್ಯೂರೊ ಸಭೆಯನ್ನು ನಡೆಸಿದ್ದು, "ಗರಿಷ್ಠ ತುರ್ತು" ವೈರಸ್ ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಪ್ರಕಟಿಸಿದ್ದಾರೆ.
ಅಲ್ಪಾವಧಿಯಲ್ಲೇ ಈ ಸೋಂಕನ್ನು ನಿರ್ಮೂಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಿಮ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾಗಿ ಕೆಸಿಎನ್ಎ ಸ್ಪಷ್ಟಪಡಿಸಿದೆ. "ಜನತೆ ರಾಜಕೀಯವಾಗಿ ತೀವ್ರ ಜಾಗೃತರಾಗಿರುವ ಕಾರಣದಿಂದ ಈ ತುರ್ತು ಸ್ಥಿತಿಯನ್ನು ನಾವು ನಿಭಾಯಿಸಲಿದ್ದೇವೆ ಮತ್ತು ಎಮರ್ಜೆನ್ಸಿ ಕ್ವಾರಂಟೈನ್ ಪ್ರಾಜೆಕ್ಟ್ ನಲ್ಲಿ ಗೆಲ್ಲಲಿದ್ದೇವೆ" ಎಂದು ಹೇಳಿದೆ.