ಮೇ 14ರಂದು ಸಚಿವೆ ನಿರ್ಮಲಾ ಸೀತಾರಾಮನ್ರಿಂದ ಶ್ರೀವಿಶ್ವೇಶತೀರ್ಥ ಸೇವಾಧಾಮ, ಕಟ್ಟಡದ ಉದ್ಘಾಟನೆ
ಉಡುಪಿ : ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಅನಾಥ ಹಾಗೂ ಅವಕಾಶವಂಚಿತ ಮಕ್ಕಳಿಗಾಗಿ ಕುಕ್ಕಿಕಟ್ಟೆ ಯಲ್ಲಿ ನಿರ್ಮಿಸಿದ ಶ್ರೀಕೃಷ್ಣ ಬಾಲನಿಕೇತನ ಕಟ್ಟಡದ ವಿಸ್ತರಿತ ಎರಡನೇ ಹಂತದ ಉದ್ಘಾಟನೆಯು ಮೇ 14ರ ಶನಿವಾರ ಅಪರಾಹ್ನ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ಉದ್ಘಾಟಿಸಲಿದ್ದಾರೆ ಎಂದು ಶ್ರೀಕೃಷ್ಣ ಸೇವಾಧಾಮ ಟ್ರಸ್ಟ್ನ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಡದ ನಿರ್ಮಾಣಕ್ಕೆ ೨೦೧೪ರ ಅಕ್ಟೋಬರ್ ನಲ್ಲಿ ಶ್ರೀವಿಶ್ವೇಶತೀರ್ಥರ ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಿಸಲಾಗಿದ್ದು, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ತಮ್ಮ ರಾಜ್ಯಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ನೀಡಿದ ೨೦ ಲಕ್ಷ ರೂ. ವೆಚ್ಚದಲ್ಲಿ ಮೊದಲ ಹಂತವನ್ನು ಪೂರ್ಣಗೊಳಿಸಲಾಗಿತ್ತು ಎಂದರು.
ಇದೀಗ ಯೋಜನೆಯ ಮುಂದಿನ ಹಂತವು ನಿರ್ಮಲಾ ಸೀತಾರಾಮನ್ ಅವರು ತನ್ನ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ನೀಡಿದ ೨೫ ಲಕ್ಷರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಇದನ್ನು ಸಚಿವೆ ನಿರ್ಮಲಾ ಅವರು ಮೇ ೧೪ರಂದು ಅಪರಾಹ್ನ ೨:೩೦ಕ್ಕೆ ಉದ್ಘಾಟಿಸಲಿದ್ದಾರೆ ಎಂದರು.
ಈ ಯೋಜನೆಯು ನಿವಾಸಿಗಳ ಕೌಶಲ್ಯಾಭಿವೃದ್ಧಿಗಾಗಿ ಆಧುನಿಕ ತಂತ್ರಜ್ಞಾನದ ಪರಿಕರಗಳನ್ನೊಳಗೊಂಡ ಗ್ರಂಥಾಲಯ, ದೃಶ್ಯಶ್ರವಣವಿಭಾಗ, ಮನರಂಜನಾ ವಿಭಾಗ, ಬೌದ್ಧಿಕ ವಿಕಸನ ತರಬೇತಿ ಕೇಂದ್ರ ಮುಂತಾದವು ಗಳನ್ನು ಹೊಂದಿದೆ.
ಇದರೊಂದಿಗೆ ಶ್ರೀಕೃಷ್ಣ ಬಾಲನಿಕೇತನವನ್ನೊಳಗೊಂಡ ಪರಿಸರವನ್ನು ಶ್ರೀವಿಶ್ವೇಶತೀರ್ಥ ಸೇವಾಧಾಮ ಎಂದು ನಾಮಕರಣ ಮಾಡಿ ಸಚಿವೆ ಉದ್ಘಾಟನೆ ನೆರವೇರಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ವಹಿಸಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ಕೆ.ರಘುಪತಿ ಭಟ್, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಪಾಲ್ಗೊಳ್ಳಲಿದ್ದಾರೆ ಎಂದು ರಾಮಚಂದ್ರ ಉಪಾಧ್ಯಾಯ ತಿಳಿಸಿದರು.
ಮುರಳಿ ಕಡೆಕಾರ್ಗೆ ಪ್ರಶಸ್ತಿ: ಶ್ರೀವಿಶ್ವೇಶತೀರ್ಥರ ಸಂಕಲ್ಪದಂತೆ ಶ್ರೀಕೃಷ್ಣ ಬಾಲನಿಕೇತನದ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರತಿವರ್ಷ ನೀಡ ಲಾಗುವ ‘ಬಾಲವಾತ್ಸಲ್ಯ ಸಿಂಧು’ ಪ್ರಶಸ್ತಿಯನ್ನು ಈ ಬಾರಿ ಮಕ್ಕಳ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಮುರಳಿ ಕಡೆಕಾರ್ ಅವರಿಗೆ ಪ್ರದಾನ ಮಾಡ ಲಾಗುವುದು ಎಂದೂ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ನ ಕಾರ್ಯದರ್ಶಿ ಪ್ರೊ.ಕಮಲಾಕ್ಷ ಉಪಸ್ಥಿತರಿ ದ್ದರು.