ದೇವಸ್ಥಾನದ ಮೇಲೆ ದಾಳಿ: 22 ಆರೋಪಿಗಳಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ನ್ಯಾಯಾಲಯ
Photo: Twitter
ಇಸ್ಲಾಮಾಬಾದ್: ಕಳೆದ ವರ್ಷ ಪಂಜಾಬ್ ಪ್ರಾಂತ್ಯದ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಿದ್ದಕ್ಕಾಗಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ) ಬುಧವಾರ 22 ಜನರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಜುಲೈ 2021 ರಲ್ಲಿ, ಲಾಹೋರ್ನಿಂದ ಸುಮಾರು 590 ಕಿಮೀ ದೂರದಲ್ಲಿರುವ ರಹೀಮ್ ಯಾರ್ ಖಾನ್ ಜಿಲ್ಲೆಯ ಭೋಂಗ್ ಪಟ್ಟಣದಲ್ಲಿರುವ ಗಣೇಶ ದೇವಸ್ಥಾನದ ಮೇಲೆ ಉದ್ರಿಕ್ತರ ಗುಂಪು ದಾಳಿ ಮಾಡಿತ್ತು. ಹಿಂದೂ ಹುಡುಗನೊಬ್ಬ ಮುಸ್ಲಿಂ ಪ್ರಾರ್ಥನಾ ಸ್ಥಳವನ್ನು ಅಪವಿತ್ರಗೊಳಿಸಿದ್ದರ ಪ್ರತಿಕ್ರಿಯೆಯಾಗಿ ಈ ದಾಳಿ ನಡೆದಿತ್ತು ಎಂದು ವರದಿಯಾಗಿದೆ.
ದುಷ್ಕರ್ಮಿಗಳು ಗುಂಪು ದೊಣ್ಣೆ ಮತ್ತು ಬಿದಿರುಗಳನ್ನು ಹಿಡಿದು ದೇವಾಲಯದ ರಕ್ಷಣೆಗೆ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ, ದೇವಾಲಯದ ಒಂದು ಭಾಗವನ್ನು ಸುಟ್ಟುಹಾಕಿತ್ತು.
ಕಳೆದ ಸೆಪ್ಟೆಂಬರ್ನಲ್ಲಿ ಆರಂಭವಾದ 84 ಬಂಧಿತ ಶಂಕಿತರ ವಿಚಾರಣೆಯು ಕಳೆದ ವಾರ ಕೊನೆಗೊಂಡಿತ್ತು.
“ಬುಧವಾರ, ಎಟಿಸಿ ನ್ಯಾಯಾಧೀಶ ನಾಸಿರ್ ಹುಸೇನ್ ಅವರು, 22 ಮಂದಿಗೆ ತಲಾ ಐದು ವರ್ಷಗಳ ಶಿಕ್ಷೆ ವಿಧಿಸಿದರು, ಉಳಿದ 62 ಮಂದಿಯನ್ನು ಅನುಮಾನದ ಪ್ರಯೋಜನವನ್ನು ನೀಡಿ ಖುಲಾಸೆಗೊಳಿಸಿದರು.” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ
ನ್ಯಾಯಾಧೀಶರು ತೀರ್ಪು ಪ್ರಕಟಿಸುವ ಮೊದಲು ಎಲ್ಲಾ ಶಂಕಿತರನ್ನು ಹೊಸ ಸೆಂಟ್ರಲ್ ಜೈಲ್ ಬಹವಾಲ್ಪುರದಿಂದ ಬಿಗಿ ಭದ್ರತೆಯ ನಡುವೆ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಸೂಕ್ತ ಪುರಾವೆಗಳನ್ನು ಹಾಗೂ ಸಾಕ್ಷ್ಯ ನೀಡಿದ ನಂತರ ನ್ಯಾಯಾಲಯವು 22 ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಸರ್ಕಾರವು ಈ ಹಿಂದೆ ಶಂಕಿತರಿಂದ 1 ಮಿಲಿಯನ್ ಪಾಕಿಸ್ತಾನ್ ರೂಪಾಯಿಯಷ್ಟು ಪರಿಹಾರವನ್ನು ವಸೂಲಿ ಮಾಡಿತ್ತು. ನಂತರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ದೇವಾಲಯವನ್ನು ನವೀಕರಿಸಲಾಯಿತು.
ನಂತರ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರು ಗಣೇಶ ಮಂದಿರದಲ್ಲಿ ನಡೆದ ಧ್ವಂಸ ಪ್ರಕರಣವು ದೇಶವನ್ನು ನಾಚಿಕೆಗೇಡು ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದ್ದರು, ಪೊಲೀಸರು ಮೂಕ ಪ್ರೇಕ್ಷಕರಂತೆ ವರ್ತಿಸಿದರು ಎಂದು ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿದ್ದರು.
ದೇವಸ್ಥಾನದ ಅಪವಿತ್ರ ಘಟನೆಯಿಂದ ಹಿಂದೂ ಸಮುದಾಯದವರಿಗೆ ಎಷ್ಟು ಮಾನಸಿಕ ಸಂಕಟ ಉಂಟಾಗಿದೆ ಎಂದು ಊಹಿಸಿಕೊಳ್ಳಿ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದರು. ಮಾತ್ರವಲ್ಲ, ದೇವಾಲಯದ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ಸಂಸತ್ತು ಕೂಡ ನಿರ್ಣಯವನ್ನು ಅಂಗೀಕರಿಸಿತ್ತು.