ಆತ್ಮಹತ್ಯೆ ಮಾಡಿಕೊಂಡ ಸಹನಾಗೆ 10 ಲಕ್ಷ ರೂ. ಪರಿಹಾರ ನೀಡಿ: ರಾಜ್ಯ ಸರಕಾರಕ್ಕೆ ಯುವ ಕಾಂಗ್ರೆಸ್ ಆಗ್ರಹ

ಉಡುಪಿ : ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಎಂಬಿಎ ಪದವೀಧರೆ ಸಹನಾ (23) ಅವರಿಗೆ ರಾಜ್ಯ ಬಿಜೆಪಿ ಸರಕಾರ ಯುವಜನತೆಗೆ ಉದ್ಯೋಗ ಒದಗಿಸಲಾಗದ ತಪ್ಪಿನ ಹೊಣೆ ಹೊತ್ತು ಅವರ ಕುಟುಂಬಕ್ಕೆ ಕೂಡಲೇ 10 ಲಕ್ಷ ರೂ. ಪರಿಹಾರ ನೀಡುವಂತೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಬನ್ನಂಜೆಯಲ್ಲಿರುವ ನೂತನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ಬೆಲೆಯೇರಿಕೆ, ನಿರುದ್ಯೋಗ, ಶೇ.40 ಕಮಿಷನ್ ಹಗರಣಗಳ ಸಹಿತ ರಾಜ್ಯ ಬಿಜೆಪಿ ಸರಕಾರದ ವೈಫಲ್ಯ ಗಳ ವಿರುದ್ಧ ಗುರುವಾರ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಮೂಲದ ಸಹನಾ(23) ಎಂಬಿಎ ಪದವೀಧರೆಯಾಗಿದ್ದು ಕಾಪು ತಾಲೂಕಿನ ಕಟ್ಟಿಂಗೇರಿಯಲ್ಲಿರುವ ಅಕ್ಕನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ 10 ದಿನಗಳ ಬಳಿಕ ಸಾವನ್ನಪ್ಪಿದ್ದರು.
ಪ್ರಧಾನಿ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದು ಈವರೆಗೆ ಎರಡು ಲಕ್ಷವನ್ನೂ ಸೃಷ್ಟಿಸಿಲ್ಲ. ಈ ಮೂಲಕ ಯುವಜನತೆಯ ಬದುಕನ್ನು ಹಾಳು ಮಾಡುತ್ತಿರುವ ಸರಕಾರಕ್ಕೆ ಉದ್ಯೋಗ ನೀಡಲಾಗ ದಿದ್ದರೆ, ಖಾಸಗಿ ಉದ್ಯೋಗ ಅಥವಾ ಸ್ವಉದ್ಯೋಗ ಮಾಡುವ ಅವಕಾಶ ವನ್ನಾದರೂ ಕಲ್ಪಿಸಬೇಕು ಎಂದವರು ಹೇಳಿದರು.
ಕೋವಿಡ್ನಿಂದ 47 ಲಕ್ಷ ಜನ ಸತ್ತಿದ್ದರೂ, ಕೇವಲ 4 ಲಕ್ಷ ಮಾತ್ರ ಸತ್ತಿದ್ದೆಂದು ತಿಪ್ಪೆ ಸಾರಿಸುತ್ತಿರುವ ಕೇಂದ್ರ ಸರಕಾರ, ಜನರ ಸಾವಿನಲ್ಲೂ ದುಡ್ಡು ಹೊಡೆಯುತ್ತಿದೆ. ಕೋವಿಡ್ನಿಂದಾಗಿ 2 ಕೋಟಿಗೂ ಅಧಿಕ ಮಂದಿ ಉದ್ಯೋಗ ಕಳೆದು ಕೊಂಡಿದ್ದಾರೆ ಎಂದರಲ್ಲದೇ, ಪದವಿ ಪಡೆದ ವರ್ಷ ಕಳೆದರೂ ಎಲ್ಲೂ ಉದ್ಯೋಗ ಸಿಗದೇ ನಿರಾಶೆಯಿಂದ ಆತ್ಮಹತ್ಯೆ ಮಾಡಿಕೊಂಡ ಸಹನಾ ಕುಟುಂಬಕ್ಕೆ ಯುವ ಕಾಂಗ್ರೆಸ್ನಿಂದ ಒಂದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾ ಕೆ. ಆರ್., ಕಾರ್ಯದರ್ಶಿ ನಾಸಿರ್, ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರೆ ಸುರಯ್ಯಾ ಅಂಜುಮ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಲಪಾಡ್, ಬಿಜೆಪಿಗೆ ಸರಕಾರ ನಡೆಸಲು ಗೊತ್ತಿಲ್ಲ. ಹೀಗಾಗಿ ಆಡಳಿತದಲ್ಲಿ ವಿಫಲವಾಗಿದೆ. ಕಾಂಗ್ರೆಸ್ನಿಂದಷ್ಟೇ ಜನಪರ ಸರಕಾರ ನೀಡಲು ಸಾಧ್ಯ. ಎಂ.ಬಿ. ಪಾಟೀಲ್, ಸಿದ್ದರಾಮಯ್ಯ, ಡಿಕೆಶಿ ಎಲ್ಲರೂ ಒಟ್ಟಾಗಿದ್ದಾರೆ. ಬಂಡೆ(ಡಿಕೆಶಿ) ಒಡೆಯಲಾಗದು ಎಂದರು.
"ಪಕ್ಷ ಬಿಟ್ಟು ಹೋದರೆ ನನ್ನಷ್ಟು ದೊಡ್ಡ ಸ್ವಾರ್ಥಿಯಿಲ್ಲ, ದ್ರೋಹಿಯಿಲ್ಲ ಎಂದು 2018ರಲ್ಲಿ ಆಡಿದ್ದ ಮಾತನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನಿಜ ಮಾಡಿದ್ದಾರೆ. ಕಾಂಗ್ರೆಸಿನಲ್ಲಿ ಯುವಜನತೆಗೆ ಆದ್ಯತೆ ನೀಡಲಾಗುತ್ತಿದ್ದು ಮುಂದಿನ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ, ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಭವಿಷ್ಯ ನುಡಿದರು.
