ಸಮಕಾಲೀನ ಸವಾಲುಗಳು ಅತೀ ಸಂಕೀರ್ಣ: ಡಾ. ಶ್ರೀಪಾದ ಭಟ್
ಉಡುಪಿ : ನಮ್ಮ ಸಮಕಾಲೀನ ಸವಾಲುಗಳು ಅತಿ ಸಂಕೀರ್ಣ ವಾಗಿದೆ. ನಮ್ಮ ಇಚ್ಛೆಗಳನ್ನು ನಿರ್ಧರಿಸುವವರು ನಾವಲ್ಲ. ಯಾವುದೋ ಬೇರೆ ವ್ಯವಸ್ಥೆ ಅದನ್ನು ನಿರ್ಧರಿಸುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆಯು ನಮ್ಮಲ್ಲಿ ಶ್ರೇಷ್ಠತೆಯ ವ್ಯಸನವನ್ನು ಉಂಟು ಮಾಡುವುದು ಈಗ ನಮ್ಮ ಮುಂದಿರುವ ಬಹುದೊಡ್ಡ ಸವಾಲುಗಳು ಎಂದು ರಂಗಕರ್ಮಿ ಡಾ.ಶ್ರೀಪಾದ್ ಭಟ್ ಹೇಳಿದ್ದಾರೆ.
ಉಡುಪಿ ಜಿಲ್ಲೆ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತು ಹಾಗೂ ತೆಂಕ ನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ದಿ.ಪುಳಿಮಾರು ಎಂ.ಕೃಷ್ಣ ಶೆಟ್ಟಿ ಸ್ಮಾರಕ ಸಮಕಾಲೀನ ಸವಾಲುಗಳು ಎಂಬ ದತ್ತಿ ಉಪನ್ಯಾಸದಲ್ಲಿ ಅವರು ಮಾತನಾಡುತಿದ್ದರು.
ನಾವು ಕಲಿಯುತ್ತಿರುವ ಭಾಷೆಯಲ್ಲಿ ಯಾವುದೇ ಭಾವನೆಯಾಗಲಿ ಕಲ್ಪನೆ ಯಾಗಲಿ ಇಲ್ಲ. ಅದು ಕೇವಲ ಸಂವಹನ ಆಗಿದೆ. ಸಂವಹನಕ್ಕೆ ಯಾವುದೇ ಸಾಂಸ್ಕೃತಿಕ ಜವಾಬ್ದಾರಿ ಇಲ್ಲ. ನಿಜವಾಗಿ ಭಾವನೆ ಮತ್ತು ಕಲ್ಪನೆ ಎರಡು ಸೇರಿದರೆ ಮಾತ್ರ ಭಾಷೆ ಆಗುತ್ತದೆ. ಸಂವಹನದ ಹೊರತಾಗಿ ಕಲ್ಪನೆ ಹಾಗೂ ಭಾವನೆಗೆ ಸಂಬಂಧಪಟ್ಟ ಭಾಷೆಗಳು ನಮ್ಮ ನಡುವೆ ಇಂದು ಕಳೆ ಹೋಗುತ್ತಿವೆ. ಅದನ್ನು ವಾಪಾಸ್ಸು ತಂದುಕೊಡುವುದೇ ಬಹಳ ದೊಡ್ಡ ಸವಾಲು ಆಗಿದೆ ಎಂದರು.
ಮನುಷ್ಯ ಮನುಷ್ಯರ ನಡುವೆ, ಮನುಷ್ಯ ಪ್ರಕೃತಿಯ ನಡುವೆ ಸಂಬಂಧಗಳು ವಿಭಜನೆಗಳಾಗುತ್ತಿವೆ. ಬದುಕಿನಲ್ಲಿ ಕಲ್ಪನೆ ಮತ್ತು ಭಾವನೆಯನ್ನು ಹುಡುಕುವುದು ಹೇಗೆ ಎಂದು ಕಲಿಸಿಕೊಟ್ಟರೆ ಸಾಕು, ಅದುವೇ ಶಿಕ್ಷಣ ಆಗುತ್ತದೆ. ನಮ್ಮ ಭಾಷೆ ಹರಿಯುವ ನೀರು ಆಗಿರುವವರೆಗೆ ಯಾರೂ ಕೂಡ ನಮ್ಮನ್ನು ಏನು ಮಾಡಲು ಆಗುವುದಿಲ್ಲ. ಭಾಷೆಯನ್ನು ನಮ್ಮ ಸ್ವಭಾವವನ್ನಾಗಿ ಮಾಡುವುದು ದೊಡ್ಡ ಸವಾಲು ಎಂದು ಅವರು ಅಭಿಪ್ರಾಯ ಪಟ್ಟರು.
ಇಂದು ದೇಹ ಮತ್ತು ಮನಸ್ಸನ್ನು ವಿಭಜಿಸಿಯೇ ಶಿಕ್ಷಣ ನೀಡಲಾಗುತ್ತದೆ. ಶಿಕ್ಷಣ ಸಂಸ್ಥೆಯಿಂದ ಕಲಿತು ಹೊರಗಡೆ ಬರುವಾಗಲೇ ನಮ್ಮ ಮನಸ್ಸು ಕೆಟ್ಟು ಹೋಗಿರುತ್ತದೆ. ಆದುದರಿಂದ ನಮಗೆ ತಲೆಯಿಂದ ಕೆಲಸ ಮಾಡುವವರು ಶ್ರೇಷ್ಠರು ಮತ್ತು ದೇಹದಿಂದ ಯಾರು ಕೆಲಸ ಮಾಡುತ್ತಾರೆಯೋ ಅವರೆಲ್ಲ ಕನಿಷ್ಠರು ಎಂಬ ಅನಿಸುತ್ತದೆ ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತಿತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಉಡುಪಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿರಾಜ್ ಎಚ್.ಪಿ. ದತ್ತಿ ಉಪನ್ಯಾಸದ ಮಹತ್ವವನ್ನು ವಿವರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ದತ್ತಿದಾನಿ ಗಳ ಕುಟುಂಬದ ಭವಾನಿ ವಿ.ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಚ್.ಕೆ.ವೆಂಕಟೇಶ್ ವಂದಿಸಿದರು.