ಓಎನ್ಜಿಸಿ ಮುಖ್ಯಸ್ಥ ಹುದ್ದೆಗೆ ಖಾಸಗಿ ಕಂಪನಿಗಳಲ್ಲಿ ಹುಡುಕಾಟ!

ಹೊಸದಿಲ್ಲಿ: ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಓಎನ್ಜಿಸಿ)ಯ ಮುಖ್ಯಸ್ಥ ಹುದ್ದೆಗೆ ಖಾಸಗಿ ವಲಯದ ಉನ್ನತ ವ್ಯಕ್ತಿಗಳನ್ನು ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು The Economic Times ವರದಿ ಮಾಡಿದೆ.
ಜಾಗತಿಕ ಮಟ್ಟದಲ್ಲಿ ವಿದ್ಯುತ್ ಹಣದುಬ್ಬರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತೈಲ ಆಮದು ಮೇಲಿನ ಅವಲಂಬನೆ ನಿಲ್ಲಿಸಬೇಕಾದರೆ ಹೆಚ್ಚಿನ ತೈಲ ಮತ್ತು ಅನಿಲ ಉತ್ಪಾದನೆಯೊಂದೇ ಮಾರ್ಗ ಎಂಬ ಕಾರಣಕ್ಕೆ ಸರ್ಕಾರ ಖಾಸಗಿ ವಲಯದ ಉನ್ನತ ಎಕ್ಸಿಕ್ಯೂಟಿವ್ಗಳ ಹುಡುಕಾಟದಲ್ಲಿದೆ ಎಂದು ಬಲ್ಲ ಮೂಲಗಳು ಹೇಳಿವೆ.
ಓಎನ್ಜಿಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡಲು ಶೋಧನೆ ಮತ್ತು ಆಯ್ಕೆ ಸಮಿತಿಯನ್ನು ಕಳೆದ ಫೆಬ್ರುವರಿಯಲ್ಲಿ ನೇಮಿಸಲಾಗಿದೆ. ಇದು ಖಾಸಗಿ ವಲಯದ ಸೂಕ್ತ ಎಕ್ಸಿಕ್ಯೂಟಿವ್ಗಳನ್ನು ಕೂಡಾ ಪರಿಗಣಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಕಂಪನಿಗೆ ಪುನಶ್ಚೇತನ ನೀಡಲು, ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ವಿಸ್ತೃತಗೊಳಿಸಲು ಮತ್ತು ಅಗತ್ಯ ದಕ್ಷತೆ ಖಾಸಗಿ ವಲಯದ ಎಕ್ಸಿಕ್ಯೂಟಿವ್ಗಳಿಂದಷ್ಟೇ ಸಾಧ್ಯ ಎನ್ನುವುದು ಸರ್ಕಾರಿ ಅಧಿಕಾರಿಗಳ ಅಭಿಮತ. ಒಟ್ಟು ದೇಶೀಯ ಉತ್ಪಾದನೆಯ ಶೇಕಡ 65ನ್ನು ಹಾಗೂ ಅನಿಲದ ಶೇಕಡ 60 ಪಾಲನ್ನು ಓಎನ್ಜಿಸಿ ಉತ್ಪಾದಿಸುತ್ತದೆ. ಆದರೆ 2021ರ ಮಾರ್ಚ್ನಲ್ಲಿ ಶಶಿ ಶಂಕರ್ ನಿವೃತ್ತಿ ಬಳಿಕ ಇದುವರೆಗೂ ಸಿಎಂಡಿ ಹುದ್ದೆ ಖಾಲಿ ಇದೆ.
ಆದರೆ ಖಾಸಗಿ ವಲಯದ ಉನ್ನತ ವ್ಯಕ್ತಿಗಳನ್ನು ಸೆಳೆಯಲು ಇರುವ ಪ್ರಮುಖ ತಡೆ ಎಂದರೆ ಪ್ರತಿಭೆಗೆ ತಕ್ಕ ಪ್ರತಿಫಲವನ್ನು ಸರ್ಕಾರಿ ಕಂಪನಿಗಳಲ್ಲಿ ನೀಡದಿರುವುದು. ಆದ್ದರಿಂದ ಸಿಎಂಡಿ ದಕ್ಷವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಆಕರ್ಷಕ ವೇತನ ಪ್ಯಾಕೇಜ್ ಹಾಗೂ ಅಗತ್ಯ ವಾತಾವರಣವನ್ನು ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ.