ಸ್ವಾತಂತ್ರ್ಯ ಸಿಕ್ಕಿರುವುದು ಕ್ರಾಂತಿಯಿಂದಲೇಹೊರತು ಅಹಿಂಸೆ, ಉಪವಾಸದಿಂದಲ್ಲ: ಪ್ರತಾಪ್ ಸಿಂಹ
ಉಡುಪಿಯಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಉದ್ಘಾಟನೆ

ಉಡುಪಿ, ಮೇ 28: ಜಗತ್ತಿನ ಇತಿಹಾಸದಲ್ಲಿ ಯಾವುದೇ ದೇಶ ಕೂಡ ಶಾಂತಿಯುತ ಹೋರಾಟದಿಂದ ಸ್ವಾತಂತ್ರವನ್ನು ಪಡೆದಿಲ್ಲ. ಎಲ್ಲ ದೇಶಗಳು ಕಾಂತ್ರಿಕಾರದಿಂದಾಗಿ ಸ್ವಾತಂತ್ರ ಪಡೆದಿದೆಯೇ ಹೊರತು ಬ್ರಿಟೀಷರ ಎದುರು ಕೇವಲ ಉಪವಾಸ, ಅಹಿಂಸೆ ಹೇಳಿಕೊಂಡು ಅಲ್ಲ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಲಾದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಮ್ಮ ದೇಶದ ಸ್ವಾತಂತ್ರ ಚಳವಳಿಯಲ್ಲಿ ಕೂಡ ಕ್ರಾಂತ್ರಿಯದ್ದೆ ದೊಡ್ಡ ಪಾತ್ರ. 1947ರ ಸ್ವಾತಂತ್ರ ಪಡೆಯುವ ಮೊದಲು ಸುಭಾಷ್ ಚಂದ್ರ ಬೋಸ್ ಅಂಡಮಾನ್ ನಿಕೋಬಾರ್ನ ಶಹೀದ್ ಹಾಗೂ ಸ್ವರಾಜ್ ಎಂಬ ದ್ವೀಪವನ್ನು ಜಪಾನೀಯರ ಸಹಾಯದಿಂದ ಪಡೆದುಕೊಂಡರು. ಆ ಮೂಲಕ ಸ್ವಾತಂತ್ರ ಗಳಿಸಿದ ದೇಶದ ಮೊದಲ ಭೂಭಾಗಳು ಇವು ಆದವು. ಸುಭಾಷ್ಚಂದ್ರ ಬೋಸ್ ಅವರ ಕ್ರಾಂತಿಯೇ ಸ್ವಾತಂತ್ರಕ್ಕೆ ಪ್ರೇಕರ ಶಕ್ತಿಯಾಗಿತ್ತು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಉಡುಪಿಯ ಅಷ್ಟ ಮಠದ ಸ್ವಾಮೀಜಿಯವರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು, ವಿಭುದೇಶ ತೀರ್ಥ ಸ್ವಾಮಿಜಿ ಸ್ವಾತಂತ್ರ್ಯ ಹೋರಾಟದ ಪ್ರಚೋದನಕಾರಿ ಭಾಷಣ ಮಾಡಿದ ಕಾರಣಕ್ಕೆ ಅವರ ಮೇಲೆ ಲಾಠಿಚಾರ್ಜ್ ಮಾಡಿದ್ದರು ಎಂದರು.
ಜಿಲ್ಲಾಧಿಕಾರಿ ಕೂರ್ಮರಾವ್ ಸಂಕಲ್ಪವಿಧಿಯನ್ನು ಬೋಧಿಸಿದರು. ಶಾಸಕ ಲಾಲಾಜಿ ಮೆಂಡನ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಎಸ್ಪಿ ಎನ್.ವಿಷ್ಣುವರ್ಧನ್, ಜಿಪಂ ಸಿಇಓ ಪ್ರಸನ್ನ ಎಚ್., ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್.ಕಲ್ಮಾಡಿ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಕಾರ್ಯಕ್ರಮ ನಿರೂ ಪಿಸಿದರು. ಯುವಜನ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಶೆಟ್ಟಿ ವಂದಿಸಿದರು.
ಈ ಸಂದರ್ಭದಲ್ಲಿ ಯಶವಂತ್ ರಾಜ್ ಬನ್ನಂಜೆ ಮತ್ತು ತಂಡದಿಂದ ದೇಶಭಕ್ತಿ ಗಾಯನ, ಪವನ್ ಆಚಾರ್ ಮತ್ತು ತಂಡದಿಂದ ಪಂಚವೀಣೆಯಲ್ಲಿ ದೇಶಭಕ್ತಿ ನುಡಿಸುವಿಕೆ, ಸ್ವಾತಂತ್ರ್ಯ ಹೋರಾಟ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು.
ಇದಕ್ಕೂ ಮುನ್ನ ಉಡುಪಿಯ ಅಜ್ಜರಕಾಡಿನ ಭುಜಂಗ ಶೆಟ್ಟಿ ಪಾರ್ಕಿನಲ್ಲಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಹಾಗೂ ಅಮೃತ ಭಾರತಿಗೆ ಕನ್ನಡದಾರತಿ ಫಲಕವನ್ನು ಅನಾವರಣ ಗೊಳಿಸಿದರು. ಅಲ್ಲಿಂದ ಗಣ್ಯರು ಸೇರಿದಂತೆ ಸಾರ್ವಜನಿಕರು, ವಿದ್ಯಾರ್ಥಿಗಳು ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ವಿವಿಧ ಕಲಾ ತಂಡಗಳು ಮೆರವಣಿಗೆ ಮೂಲಕ ಕ್ರೀಡಾಂಗಣಕ್ಕೆ ತಲುಪಿತು.