ಪೂರ್ವ ಉಕ್ರೇನ್ಗೆ ರಶ್ಯನ್ ಪಡೆಗಳ ಲಗ್ಗೆ: ಸಿವಿರೊಡೊನೆಟ್ಸ್ಕ್ ವಶಕ್ಕೆ
ಲಿಸಿಚಾನ್ಸ್ಕ್ ನಗರದ ಮೇಲೂ ಮುಂದುವರಿದ ದಾಳಿ
ಮಾಸ್ಕೊ,ಮೇ 29: ಉಕ್ರೇನ್ ಮೇಲಿನ ರಶ್ಯದ ಆಕ್ರಮಣ ಆರಂಭಿಸಿ 100 ದಿನ ಸಮೀಪಿಸುತ್ತಿರುವಂತೆಯೇ, ರಶ್ಯ ಸೇನೆಯು ಉಕ್ರೇನ್ನ ಸಣ್ಣಪುಟ್ಟ ನಗರಗಳನ್ನು ಒಂದೊಂದಾಗಿ ವಶಪಡಿಸಿಕೊಳ್ಳುತ್ತಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ. ಉಕ್ರೇನ್ನ ಪೂರ್ವ ಭಾಗದ ನಗರ ಸಿವಿರೊಡೊನೆಟ್ಸ್ಕ್ ಮೇಲೆ ರಶ್ಯದ ಪಡೆಗಳು ಮುತ್ತಿಗೆ ಹಾಕಿರುವುದಾಗಿ ಉಕ್ರೇನ್ ನ ಪ್ರಾದೇಶಿಕ ಅಧಿಕಾರಿಗಳು ವರದಿ ಮಾಡಿದ್ದಾರೆ.ರಶ್ಯ ಆಕ್ರಮಣದ ಬಳಿಕ ನಗರದಲ್ಲಿ ವಿದ್ಯುತ್ ಹಾಗೂ ಮೊಬೈಲ್ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿದೆ. ನಾಗರಿಕರು ಭಯಭೀತರಾಗಿ ಪಲಾಯನ ಮಾಡುತ್ತಿದ್ದಾರೆ.
ಸಿವಿರೊಡೊನೆಟ್ಸ್ಕ್ ಸಮೀಪದ ನಗರ ಲಿಸಿಚಾನ್ಸ್ಕ್ ಅನ್ನು ಕೂಡಾ ವಶಪಡಿಸಿಕೊಳ್ಳಲು ರಶ್ಯ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆಯೆಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.ಒಟ್ಟಾಗಿ ಎರಡು ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ಎರಡು ನಗರಗಳು ಲಿಸಿಚಾನ್ಸ್ಕ್ ಪ್ರಾಂತದಲ್ಲಿ ಉಕ್ರೇನ್ ನಿಯಂತ್ರಣದಲ್ಲಿರುವ ಕಟ್ಟಕಡೆಯ ಪ್ರದೇಶಗಳಾಗಿವೆ. ದೇಶಾದ್ಯಂತ ಉಕ್ರೇನ್ನ ಸೇನಾನೆಲೆಗಳನ್ನು ಗುರಿಯಿರಿಸಿ ನಡೆಸಿರುವ ದಾಳಿಗಳಿಂದಾಗಿ ನಾಗರಿಕ ವಸತಿ ಪ್ರದೇಶಗಳಲ್ಲೂ ಅಪಾರ ಸಾವುನೋವುಗಳು ಸಂಭವಿಸಿರುವುದಾಗಿ ಮೂಲಗಳು ತಿಳಿಸಿವೆ.
ಶನಿವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ವಿಡಿಯೋ ಭಾಷಣದಲ್ಲಿ ಪೂರ್ವ ಉಕ್ರೇನ್ನ ಪರಿಸ್ಥಿತಿ ಅತ್ಯಂತ ಸಂಕೀರ್ಣವಾಗಿದೆ ಹಾಗೂ ವರ್ಣಿಸಲೂ ಆಗದಷ್ಟು ಸಂಕಷ್ಟಕರವಾಗಿದೆ ಎಂದು ಹೇಳಿದ್ದರು. ಪೂರ್ವ ಉಕ್ರೇನ್ ಪ್ರಾಂತದ ಮೇಲೆಯೇ ತನ್ನ ದಾಳಿಗಳನ್ನು ಕೇಂದ್ರೀಕರಿಸುವ ಮೂಲಕ ರಶ್ಯ ಸೇನೆಯು ಕನಿಷ್ಠ ಮಟ್ಟದ ಫಲಿತಾಂಶವನ್ನಾದರೂ ಪಡೆಯಲು ಬಯಸುತ್ತಿದೆ ಎಂದವರು ವ್ಯಂಗ್ಯವಾಡಿದ್ದರು.
ಉಕ್ರೇನ್ ಗೆ ಶಸ್ತ್ರಾಸ್ತ್ರ ಪೂರೈಕೆ ವಿರುದ್ಧ ಜರ್ಮನಿ, ಫ್ರಾನ್ಸ್ ಗೆ ಪುತಿನ್ ಎಚ್ಚರಿಕೆ
ಮಾಸ್ಕೊ,ಮೇ 29: ಯುದ್ಧ ಪೀಡಿತ ಉಕ್ರೇನ್ನ ಬಂದರುಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಧವಸಧಾನ್ಯಗಳನ್ನು ಹಡಗುಗಳಲ್ಲಿ ರವಾನೆ ಮಾಡಲು ಮಾರ್ಗೋಪಾಯಗಳನ್ನು ಹುಡುಕಲು ತಾನು ಸಿದ್ಧವಿರುವುದಾಗಿ ರಶ್ಯ ಅಧ್ಯಕ್ಷ ವೊಲೊಡಿಮಿರ್ ಪುಟಿನ್ ಅವರು ಶನಿವಾರ ಜರ್ಮನಿ ಹಾಗೂ ಫ್ರಾನ್ಸ್ ದೇಶಗಳ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ಆದರೆ ಅದಕ್ಕೂ ಮುನ್ನ ರಶ್ಯದ ಮೇಲೆ ಹೇರಲಾಗಿರುವ ಪಾಶ್ಚಾತ್ಯ ರಾಷ್ಟ್ರಗಳು ಹಿಂಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಹಾಗೂ ಜರ್ಮನಿಯ ಚಾನ್ಸಲರ್ ಒಲಾಫ್ ಶೋಲ್ಝ್ ಜೊತೆ ವಿಡಿಯೋಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿರುವುದರ ವಿರುದ್ಧವೂ ಪುತಿನ್ ಈ ಎರಡು ರಾಷ್ಟ್ರಗಳ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್ ಗೆ ಶಸ್ತ್ರಾಸ್ತ್ರಗಳ ಪೂರೈಕೆಯಿಂದಾಗಿ ಆ ದೇಶದ ಪರಿಸ್ಥಿತಿ ಇನ್ನಷ್ಟು ಅಸ್ಥಿರಗೊಳ್ಳಲಿದೆಯೆಂದು ಅವರು ಹೇಳಿದ್ದಾರೆ. ಪಾಶ್ಚಾತ್ಯ ರಾಷ್ಟ್ರಗಳ ಪ್ರಮಾದಕಾರಿ ಆರ್ಥಿಕ ಹಾಗೂ ವಿತ್ತೀಯ ನೀತಿಗಳಿಂದಾಗಿಯೇ ಉಕ್ರೇನ್ನಿಂದ ಜಾಗತಿಕ ಮಾರುಕಟ್ಟೆಗಳಿಗೆ ಧವಸಾ ಧಾನ್ಯಗಳ ಪೂರೈಕೆ ಕಷ್ಟಕರವಾಗಿದೆಯೆಂದು ಪುಟಿನ್ ತಿಳಿಸಿದ್ದಾರೆ.
ಮಾತುಕತೆಯು ಸುಮಾರು 80 ನಿಮಿಷಗಳ ಕಾಲ ನಡೆಯಿತೆಂದು ಜರ್ಮನಿಯ ಚಾನ್ಸಲರ್ ಕಾರ್ಯಾಲಯದ ಹೇಳಿಕೆಯು ತಿಳಿಸಿದೆ. ‘ಕಪ್ಪು ಸಮುದ್ರದ ಬಂದರುಗಳಿಂದ ಉಕ್ರೇನ್ನ ಧಾನ್ಯಗಳ ರವಾನೆಯೂ ಸೇರಿದಂತೆ‘ ರಶ್ಯವು ಧವಸಾಧ್ಯಗಳ ಅಬಾಧಿತ ರಫ್ತಿ ಸಾಧ್ಯವಾಗುವಂತಹ ಆಯ್ಕೆಗಳನ್ನು ಕಂಡುಕೊಳ್ಳಲು ಸಿದ್ಧವಾಗಿದೆ ಎಂದರು.ರಶ್ಯದ ರಸಗೊಬ್ಬರ ಹಾಗೂ ಕೃಷಿ ಉತ್ಪನ್ನಗಳ ಪೂರೈಕೆಯಲ್ಲಿನ ಹೆಚ್ಚಳವು ಜಾಗತಿಕ ಆಹಾರ ಮಾರುಕಟ್ಟೆಯಲ್ಲಿ ಉಂಟಾಗಿರುವ ಉದ್ವಿಗ್ನತೆಗಳನ್ನು ಕಡಿಮೆಗೊಳಿಸಲು ನೆರವಾಗಲಿದೆ. ಆದರೆ ಇದಕ್ಕೆ ಚಾಲ್ತಿಯಲ್ಲಿರುವ ನಿರ್ಬಂಧಗಳನ್ನು ತೆಗೆದುಹಾಕಬೇಕಾದ ಅಗತ್ಯವಿದೆ. ಎಂದು ಪುತಿನ್ ಮಾತುಕತೆಯಲ್ಲಿ ಹೇಳಿದ್ದಾರೆಂದು ತಿಳಿದುಬಂದಿದೆ.