ಪೊಲೀಸ್-ಗ್ಯಾರೇಜ್ ಮಾಲಕರ ಸಂಘದ ಸಭೆ

ಉಡುಪಿ : ಉಡುಪಿ ನಗರ ಠಾಣಾ ವ್ಯಾಪ್ತಿಯ ಗ್ಯಾರೇಜ್ ಮಾಲಕರ ಸಂಘ ಹಾಗೂ ಪೊಲೀಸರ ಸಭೆಯೊಂದು ರವಿವಾರ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್ರ ಮಾರ್ಗದರ್ಶನದಲ್ಲಿ ಹಾಗು ನಗರ ವೃತ್ತ ನಿರೀಕ್ಷಕ ಪ್ರಮೋದ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ರವಿವಾರ ಉಡುಪಿ ನಗರ ಠಾಣೆಯಲ್ಲಿ ಪೊಲೀಸ್ ಮತ್ತು ಗ್ಯಾರೇಜ್ ಮಾಲಕರ ಸಭೆ ನಡೆದಿದ್ದು, ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಗ್ಯಾರೇಜ್ ಮಾಲಕರ ಸಂಘದ ಸಹಕಾರ ಕೋರಲಾಯಿತು.
ಸಭೆಯಲ್ಲಿ ವಾಹನಗಳನ್ನು ಮೋಡಿಪೈ ಮಾಡುವವರ ಬಗ್ಗೆ ಮಾಹಿತಿ ಮತ್ತು ತಡೆಗಟ್ಟುವಿಕೆ, ಗ್ಯಾರೇಜ್ಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಸಲಹೆ, ದುರಸ್ತಿಗೆ ಬರುವ ವಾಹನದಲ್ಲಿ ದನದ ವಾಸನೆ ಅಥವಾ ಯಾವುದೇ ರಕ್ತದ ಕಲೆಗಳು ಕಂಡುಬಂದಲ್ಲಿ ಕೂಡಲೇ ಠಾಣೆಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಯಿತು.
ಪದೇಪದೇ ವಾಹನ ನಂಬರ್ ಪ್ಲೇಟ್ ಬದಲಾಯಿಸುವುದು ಅಥವಾ ವಾಹನದ ಚಾಸಿಸ್ ನಂಬರ್ ಬದಲಾಯಿಸುವ ಬಗ್ಗೆ ಮಾಹಿತಿ, ನಿರ್ವಹಣೆಗೆ ಬರುವ ವಾಹನದ ರಿಜಿಸ್ಟರ್ ನಂಬರ್ ಮತ್ತು ಚಾಸಿಸ್ ಸಂಖ್ಯೆಗಳನ್ನು ಆಯಾ ದಿನಾಂಕದಂದು ರಿಜಿಸ್ಟರ್ನಲ್ಲಿ ನಮೂದಿಸುವ ಬಗ್ಗೆ, ಜಿಲ್ಲಾ ಗ್ಯಾರೇಜ್ ಮಾಲಕರ ವಾಟ್ಸಪ್ ಗ್ರೂಪ್ ರಚಿಸಿ ಪೊಲೀಸ್ ಅಧಿಕಾರಿಗಳು ನೀಡಿದ ಮಾಹಿತಿ ಹಂಚಿಕೊಳ್ಳುವಂತೆ ತಿಳಿಸಲಾಯಿತು.
ಮೊಬೈಲ್ ಸರ್ವಿಸ್ ವಾಹನಗಳು ಲೈಸೆನ್ಸ್ ಇಲ್ಲದೆ ಪೋಸ್ಟ್ ಸರ್ವಿಸ್ ನೀಡುವುದರಿಂದ, ತೆರಿಗೆ ಪಾವತಿಸಿ ಗ್ಯಾರೇಜ್ಗಳನ್ನು ಹಾಕಿ ಕೆಲಸ ನಿರ್ವಹಿಸುತ್ತಿ ರುವ ಗ್ಯಾರೇಜ್ ಮಾಲಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಲಾಯಿತು. ಯಾವುದೇ ಸಂಶಯಾಸ್ಪದ ಮಾಹಿತಿ ಇದ್ದರೂ ಪೊಲೀಸರು ಹಾಗೂ ಗ್ಯಾರೇಜು ಮಾಲಕರು ಮಾಹಿತಿ ವಿನಿಮಯ ಮಾಡಿಕೊಳ್ಳುವ ಬಗ್ಗೆ ಸಭೆಯಲ್ಲಿ ವಿಶೇಷ ಚರ್ಚೆ ನಡೆಯಿತು.
ಸಭೆಯಲ್ಲಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ರೋಷನ್ ಕರ್ಕಡ ಕಾಪು, ಉಪಾಧ್ಯಕ್ಷ ವಿನಯ ಕುಮಾರ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ಗೌರವ ಸಲಹೆಗಾರದ ವಿಲ್ಸನ್ ಅಂಚನ್, ಯಾದವ್ ಶೆಟ್ಟಿಗಾರ್, ಕೋಶಾಧಿಕಾರಿ ಸಂತೋಷ್ ಕುಮಾರ್, ಪದಾಧಿಕಾರಿಗಳಾದ ಅಶೋಕ್ ಚಕ್ರವರ್ತಿ, ಸಿಲ್ವಸ್ಟರ್ ಡಿಸೋಜ, ಸಂತೋಷ್ ಕಾಪು, ಸಂತೋಷ್ ಕರ್ಕೇರ, ರವೀಂದ್ರ ಶೇಟ್, ರಾಘವೇಂದ್ರ ಆಚಾರ್ಯ, ಸುರೇಶ್, ಪೊಲೀಸ್ ಅಧಿಕಾರಿಗಳಾದ ಮಹೇಶ್, ಪ್ರಸಾದ್ ಕಲ್ಯಾಡಿ, ವಾಸಪ್ಪ ನಾಯ್ಕ್, ಚೇತನ್ ಮತ್ತಿತರರು ಹಾಜರಿದ್ದರು.