ತಪ್ಪು ಮಾಡಿದ್ದು ಬಿಜೆಪಿ, ಕ್ಷಮೆ ಕೇಳಿದ್ದು ಭಾರತ, ಇದು ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ: ಕಾಂಗ್ರೆಸ್

ಹೊಸದಿಲ್ಲಿ: ಬಿಜೆಪಿ ಮಾಡಿರುವ ತಪ್ಪಿಗೆ ಭಾರತವು ಕುವೈತ್ ಹಾಗೂ ಖತರ್ ನ ಕ್ಷಮೆ ಕೋರಿದ್ದಕ್ಕೆ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ತಪ್ಪು ಮಾಡಿದ್ದು ಬಿಜೆಪಿ, ಕ್ಷಮೆ ಕೇಳಿದ್ದು ಭಾರತ, ಇದು ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಟ್ವೀಟಿಸಿದ್ದಾರೆ.
"ಭಾರತವು ಕ್ಷಮೆ ಕೇಳಬೇಕಾದ ಯಾವುದೇ ತಪ್ಪನ್ನು ಮಾಡಿಲ್ಲ, ಬಿಜೆಪಿಯಿಂದ ತಪ್ಪಾಗಿದೆ. ಇದಕ್ಕೆ ದೇಶವೇಕೆ ಕ್ಷಮೆಯಾಚಿಸಬೇಕು? ಪ್ರಧಾನಿಗೆ ಅವರ ರಾಜಧರ್ಮವನ್ನು ಖತರ್ ಹಾಗೂ ಕುವೈತ್ ನೆನಪಿಸುತ್ತಿವೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ?," ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಹಾಗೂ ಅವರ ಪಕ್ಷವು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ ಮತ್ತು ಭಾರತವು ಕ್ಷಮೆಯಾಚಿಸುತ್ತಿದೆಯೇ? ಇಲ್ಲಿ ಯಾವುದೇ ಭಾರತೀಯರ ತಪ್ಪಿದೆ ಎಂದು ನಾವು ಒಪ್ಪುವುದಿಲ್ಲ. ಭಾರತವು ಸಂವಿಧಾನದಲ್ಲಿ ಪ್ರತಿಪಾದಿಸಿದ ಮೌಲ್ಯಗಳನ್ನು ಯಾವಾಗಲೂ ಗೌರವಿಸುತ್ತದೆ. ಬಿಜೆಪಿಯವರು ಅದನ್ನು ಮಾಡುವುದಿಲ್ಲ, ಬಿಜೆಪಿಯವರು ಕ್ಷಮೆಯಾಚಿಸಬೇಕು ಎಂದರು.
ಬಿಜೆಪಿ ವಕ್ತಾರರ ಹೇಳಿಕೆಗಳಿಂದ ಭಾರತವು ಗಲ್ಫ್ನಿಂದ ಭಾರಿ ಖಂಡನೆಯನ್ನು ಎದುರಿಸುತ್ತಿದೆ.
ಸೌದಿ ಅರೇಬಿಯಾ, ಖತರ್, ಬಹರೈನ್ ಮತ್ತು ಇರಾನ್ ಬಿಜೆಪಿ ವಕ್ತಾರರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿವೆ ಮತ್ತು ಅವುಗಳನ್ನು "ಇಸ್ಲಾಂಫೋಬಿಕ್" ಎಂದು ಬಣ್ಣಿಸಿವೆ.