ವಿದ್ಯಾರ್ಥಿಗಳ ಸಾಧನೆಯೇ ಉತ್ತರವಾಗಬೇಕು: ರಘುಪತಿ ಭಟ್

ಉಡುಪಿ, ಜೂ.೬: ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಬೇಕು. ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕು. ಅವರ ಸಾಧನೆಯು ಎಲ್ಲ ವ್ಯಕ್ತಿಗಳ ಪ್ರಶ್ನೆಗಳಿಗೆ ಉತ್ತರವಾಗಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು
ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಹಲವು ಅಡೆತಡೆಗಳನ್ನು ಮೀರಿ ನಿಂತು ಇಂದು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ವಿದ್ಯಾದಾನ ಮಾಡುತ್ತಿದೆ. ಪ್ರತಿವರ್ಷ ವಿದ್ಯಾರ್ಥಿನಿಯರ ಸಂಖ್ಯೆ ಮತ್ತು ಸಾಧಕರ ಸಂಖ್ಯೆಯೂ ಹೆಚ್ಚುತ್ತಿದೆ ಎಂದರು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನಿಯಾದ ಗಾಯತ್ರಿ ಮತ್ತು ಅತಿ ಹೆಚ್ಚು ಅಂಕ ಗಳಿಸಿದ ೪೮ ವಿದ್ಯಾರ್ಥಿನಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ನಗರಸಭಾ ಸದಸ್ಯೆ ರಶ್ಮಿ ಸಿ.ಭಟ್, ಎಸ್ಡಿ ಎಂಸಿ ಅಧ್ಯಕ್ಷೆ ವಿನೋದ ಸುವರ್ಣ, ಪ್ರಾಂಶುಪಾಲ ರುದ್ರೆ ಗೌಡ, ವಿಶ್ವನಾಥ ಬಾಯಿರಿ, ಎಸ್ಡಿಎಂಸಿ ಗೌರವಾಧ್ಯಕ್ಷೆ ತಾರಾ, ಸಾಫಲ್ಯ ಟ್ರಸ್ಟ್ನ ಶಾಂಭವಿ ಮುಂತಾದವರು ಭಾಗವಹಿಸಿದ್ದರು.
ಹಿರಿಯ ಶಿಕ್ಷಕಿ ಜಯಲಕ್ಷ್ಮಿ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಇಂದಿರಾ ವಂದಿಸಿದರು.