ಐಸಿಎಐನ ರಾಷ್ಟ್ರ ಮಟ್ಟದ ಪರಿಜ್ಞಾನ ಸಮಾವೇಶ ಉದ್ಘಾಟನೆ
ಮಂಗಳೂರು, ಜೂ.೭: ಭಾರತೀಯ ಲೆಕ್ಕ ಪರಿಶೋಧಕರ ಸಂಘದ (ಐಸಿಎಐ)ಮಂಗಳೂರು ಶಾಖೆ ಏರ್ಪಡಿಸಿರುವ ರಾಷ್ಟ್ರ ಮಟ್ಟದ ೨ ದಿನಗಳ ಪರಿಜ್ಞಾನ ಸಮಾವೇಶ ಇಂದು ಉದ್ಘಾಟನೆಗೊಂಡಿತು.
ಭಾರತೀಯ ಲೆಕ್ಕಪರಿಶೋಧಕ ಸಂಘದ ಕೇಂದ್ರ ಸಮಿತಿ ಸದಸ್ಯ ಕೋಥಾ ಶ್ರೀನಿವಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಸಕ್ತ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ಆರ್ಥಿಕ ನಿರ್ವಹಣೆಯ ಬಗ್ಗೆ ತಿಳಿದಿರುವ ಅಗತ್ಯವಿದೆ ಎಂದರು.
ದೇಶದಲ್ಲಿ ೩೦ ಸಾವಿರ ಮಂದಿ ಲೆಕ್ಕಪರಿಶೋಧಕರಿದ್ದಾರೆ. ಇದರಲ್ಲಿ ೧೫ ಸಾವಿರ ಮಂದಿ ಕರ್ನಾಟಕದಲ್ಲಿದ್ದು, ಇತರೆ ರಾಜ್ಯಗಳಲ್ಲಿ ತಲಾ ಐದಾರು ಸಾವಿರ ಮಂದಿ ಇದ್ದಾರೆ. ಹಣಕಾಸು ನಿರ್ವಹಣೆಯಲ್ಲಿ ಲೆಕ್ಕಪರಿಶೋಧಕರ ಪಾತ್ರ ಮಹತ್ವದ್ದಾಗಿದೆ ಎಂದವರು ಅಭಿಪ್ರಾಯಿಸಿದರು.
ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನದ ಪರಿಣಾಮ ಲೆಕ್ಕಪರಿಶೋಧನಾ ಕ್ಷೇತ್ರಕ್ಕೂ ತಟ್ಟಿದೆ. ಇದರಿಂದಾಗಿ ಲೆಕ್ಕಪರಿಶೋಧಕರ ಬೇಡಿಕೆ ಕುಂಠಿತವಾಗಿದೆ. ಅಲ್ಲದೆ ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯಲ್ಲಿ ಲೆಕ್ಕಪರಿಶೋಧನಾ ಕೋರ್ಸ್‌ಗಳಲ್ಲಿ ಪಠ್ಯದ ಸಂಖ್ಯೆ ೮ರಿಂದ ೬ಕ್ಕೆ ಇಳಿಕೆಯಾಗಿದೆ. ಇದು ಕೂಡ ಲೆಕ್ಕಪರಿಶೋಧಕ ಶಿಕ್ಷಣಕ್ಕೆ ಸವಾಲಾಗಿ ಪರಿಣಮಿಸಿದೆ. ಲೆಕ್ಕಪರಿಶೋಧನೆಗೆ ಸಂಬಂಧಿಸಿದ ಡಿಪ್ಲೊಮಾ ಕೋರ್ಸ್‌ಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಶೇ.೩೦ರಷ್ಟು ಶುಲ್ಕ ವಿನಾಯಿತಿ ಘೋಷಿಸಲಾಗಿದೆ ಎಂದವರು ಹೇಳಿದರು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ತೆರಿಗೆ ಪಾವತಿ ವ್ಯವಸ್ಥೆ ಸಮರ್ಪಕವಾಗಿ ನಡೆಯಲು ಲೆಕ್ಕಪರಿಶೋಧಕರ ನೆರವು ಪಡೆಯುವಂತೆ ಕೋರಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಪಾಲಿಕೆ ಜತೆ ಸಮಾಲೋಚನೆ ನಡೆಸಲಾಗುವುದು ಎಂದರು.
ಐಸಿಎಐ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿ ಅಧ್ಯಕ್ಷ ಚೀನಾ ಮಸ್ತಾನ್ ಸಮಾವೇಶ ಉದ್ಘಾಟಿಸಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ ಐಸಿಎಐ ಮಂಗಳೂರು ಶಾಖೆಯ ಅಧ್ಯಕ್ಷ ಪ್ರಸನ್ನ ಶೆಣೈ ಪ್ರಾಸ್ತಾವಿಕದಲ್ಲಿ, ಈ ಸಮ್ಮೇಳನದಲ್ಲಿ ಆರು ತಾಂತ್ರಿಕ ಸಮಾವೇಶ ನಡೆಯಲಿದೆ. ಸುಮಾರು ೭೫೦ ಮಂದಿ ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದರು.
ಐಸಿಎಐ ಕೋಶಾಧಿಕಾರಿ ಪ್ರಶಾಂತ್ ಪೈ, ಸಿಕಾಸ ಅಧ್ಯಕ್ಷ ಡೇನಿಯಲ್ ಪಿರೇರಾ, ಪ್ರಾದೇಶಿಕ ಸಮಿತಿ ಸದಸ್ಯೆ ಗೀತಾ ಇದ್ದರು