ಉಡುಪಿ: ಜಿಲ್ಲೆಯಲ್ಲಿ ಮತ್ತೆ ಮೂವರಲ್ಲಿ ಕೋವಿಡ್ ಸೋಂಕು ಪತ್ತೆ
ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಹೊಸದಾಗಿ ಮೂವರಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 9ಕ್ಕೇರಿದೆ.
ಮಂಗಳವಾರ ಜಿಲ್ಲೆಯಲ್ಲಿ ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆ ಕೋವಿಡ್ಗೆ ಪಾಸಿಟಿವ್ ಬಂದಿದ್ದಾರೆ. ಇಂದು ಪಾಸಿಟಿವ್ ಬಂದ ಮೂವರು ಸಹ ಉಡುಪಿ ತಾಲೂಕಿನವರು.
ಜಿಲ್ಲೆಯಲ್ಲಿ ಇಂದು ಒಟ್ಟು ೨೬೧೩ ಮಂದಿಯನ್ನು ಕೋವಿಡ್ ಪರೀಕ್ಷೆ ಗೊಳಪಡಿಸಲಾಗಿದ್ದು, ಉಡುಪಿ ತಾಲೂಕಿನ ೧೯೫ ಮಂದಿಯಲ್ಲಿ ಮೂವರು ಪಾಸಿಟಿವ್ ಬಂದಿದ್ದಾರೆ. ಉಳಿದಂತೆ ಕುಂದಾಪುರ ತಾಲೂಕಿನ 41 ಮಂದಿ ಯಲ್ಲಿ ಹಾಗೂ ಕಾರ್ಕಳ ತಾಲೂಕಿನ 25 ಮಂದಿಯಲ್ಲಿ ಸೋಂಕು ಕಂಡುಬಂದಿಲ್ಲ.
೪೭೧ ಮಕ್ಕಳಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು ೬೮೯ ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ ೪೭೧ ಮಂದಿ ೧೨ರಿಂದ ೧೪ ವರ್ಷದೊಳಗಿನ ಮಕ್ಕಳೂ ಸೇರಿದ್ದಾರೆ. ೧೬೦ ಮಕ್ಕಳಿಗೆ ಮೊದಲ ಡೋಸ್ ನೀಡಿದ್ದರೆ, ೩೧೧ ಮಂದಿ ಮಕ್ಕಳು ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯ ೩೩,೦೦೬ ಮಂದಿ ಮಕ್ಕಳು ಮೊದಲ ಡೋಸ್ ಹಾಗೂ ೨೫,೪೫೩ ಮಂದಿ ಎರಡನೇ ಡೋಸ್ ಪಡೆದಿದ್ದಾರೆ.