ಅಡಿಕೆಗೆ ಬೇಡಿಕೆಯಲ್ಲಿನ ಹಿನ್ನಡೆ ತಾತ್ಕಾಲಿಕ, ಆತಂಕ ಬೇಡ: ರೈತರಿಗೆ ಕ್ಯಾಂಪ್ಕೋ ಭರವಸೆ

ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ
ಮಂಗಳೂರು, ಜೂ.8: ಉತ್ತರ ಭಾರತದಲ್ಲಿ ಅತೀ ಹೆಚ್ಚು ಉಷ್ಣತೆ ಇರುವುದರಿಂದ ಕರಾವಳಿ ಭಾಗದ ಅಡಿಕೆಯ ಬೇಡಿಕೆಗೆ ತಾತ್ಕಾಲಿಕ ಹಿನ್ನಡೆಯಾಗಿದೆ. ಮುಂದಿನ ಕೆಲದಿನಗಳಲ್ಲಿ ಸಮಸ್ಯೆ ಪರಿಹಾರದ ನಿರೀಕ್ಷೆಯಿದೆ. ಅಡಿಕೆಗೆ ಬೇಡಿಕೆಯಲ್ಲಿನ ಹಿನ್ನಡೆ ತಾತ್ಕಾಲಿಕ, ರೈತರು ಆತಂಕಪಡಬೇಕಾಗಿಲ್ಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಪ್ರತೀ ವರ್ಷ ವಿದೇಶದಿಂದ ಅಡಿಕೆ ಆಮದು ಆಗುತ್ತಿದ್ದು, ಈ ಬಾರಿಯೂ ಅಷ್ಟೇ ಪ್ರಮಾಣದ ಅಡಿಕೆ ಆಮದು ಆಗಿರುತ್ತದೆ. ಇದರಿಂದ ರೈತರು ಆತಂಕಪಡಬೇಕಾಗಿಲ್ಲ. ಅಡಿಕೆ ಆಮದು ತಡೆಗೆ ಕ್ಯಾಂಪ್ಕೋ ಸರ್ವ ರೀತಿಯಲ್ಲೂ ಪ್ರಯತ್ನಿಸುತ್ತಿದ್ದು ಕೇಂದ್ರ ಸರಕಾರದ ಸಚಿವರು ಮತ್ತು ಇಲಾಖಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಕಿಶೋರ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಾರುಕಟ್ಟೆ ಸಮೀಕ್ಷೆ ಪ್ರಕಾರ, ಉತ್ತರ ಭಾರತದ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದಾಸ್ತಾನಿನಲ್ಲಿ ಕೊರತೆ ಇದೆ. ಮುಂದಿನ ದಿನಗಳಲ್ಲಿ ಮುಂಗಾರು ಪ್ರಾರಂಭವಾಗಿ ಉತ್ತರ ಭಾರತಲ್ಲಿ ಉಷ್ಣತೆ ಕಡಿಮೆಯಾಗಲಿದ್ದು, ಅಡಿಕೆಗೆ ಉತ್ತಮ ಬೇಡಿಕೆ ಬರುವ ಎಲ್ಲಾ ಅವಕಾಶಗಳಿರುವುದರಿಂದ ಬೇಡಿಕೆಯಲ್ಲಿ ಚೇತರಿಕೆ ಕಾಣಲಿದೆ. ಹಾಗಾಗಿ ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಮತ್ತು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ, ಅಗತ್ಯ ಖರ್ಚಿಗೆ ಬೇಕಾಗುವಷ್ಟೇ ಅಡಿಕೆ ಮಾರಾಟ ಮಾಡುವಂತೆ ಕ್ಯಾಂಪ್ಕೋ ಅಧ್ಯಕ್ಷರು ಸಲಹೆ ನೀಡಿದ್ದಾರೆ.