ಮಗನ ಮೃತದೇಹಕ್ಕಾಗಿ ಆಸ್ಪತ್ರೆಗೆ 50 ಸಾವಿರ ರೂ. ಲಂಚ ನೀಡಲು ಭಿಕ್ಷೆ ಬೇಡಿದ ವೃದ್ಧ ದಂಪತಿ!

ಸಮಷ್ಟಿಪುರ (ಬಿಹಾರ): ಸರ್ಕಾರಿ ಆಸ್ಪತ್ರೆಯಿಂದ ಮಗನ ಮೃತದೇಹವನ್ನು ಪಡೆಯಲು "ಲಂಚ ನೀಡುವ" ಸಲುವಾಗಿ ವೃದ್ಧ ದಂಪತಿ ಬಿಹಾರದ ಸಮಷ್ಟಿಪುರ ಬೀದಿಗಳಲ್ಲಿ ಭಿಕ್ಷಾಟನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಮಗನ ಶವವನ್ನು ನೀಡಲು ಆಸ್ಪತ್ರೆಯ ಸಿಬ್ಬಂದಿ 50 ಸಾವಿರ ರೂಪಾಯಿ ಲಂಚ ಕೇಳಿದ್ದರು ಎಂದು ಆಪಾದಿಸಲಾಗಿದೆ.
ಈ ವೃದ್ಧ ದಂಪತಿಯಲ್ಲಿ ಅಷ್ಟೊಂದು ಹಣ ಇಲ್ಲದ ಕಾರಣ ಮಗನ ಶವ ಪಡೆಯಲು ನಗರದ ಬೀದಿಗಳಲ್ಲಿ ಭಿಕ್ಷಾಟನೆ ಮಾಡಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ಮಗ ನಾಪತ್ತೆಯಾಗಿದ್ದ ಎಂದು ವೃದ್ಧ ತಂದೆ ಹೇಳಿದ್ದಾರೆ.
"ಕೆಲ ದಿನಗಳ ಹಿಂದೆ ಮಗ ಕಾಣೆಯಾಗಿದ್ದ. ಇದೀಗ ಮಗನ ಮೃತದೇಹ ಸಮಷ್ಟಿಪುರದ ಸದರ್ ಆಸ್ಪತ್ರೆಯಲ್ಲಿ ಇದೆ ಎಂಬ ಕರೆ ಬಂದಿದೆ. ಮಗನ ಮೃತದೇಹವನ್ನು ನೀಡಲು ಆಸ್ಪತ್ರೆ ಸಿಬ್ಬಂದಿಯೋರ್ವ 50 ಸಾವಿರ ರೂಪಾಯಿ ಕೇಳಿದ್ದಾನೆ. ನಾವು ಬಡವರು. ಇಷ್ಟೊಂದು ಹಣ ಎಲ್ಲಿಂದ ತರಬೇಕು" ಎಂದು ಮಹೇಶ್ ಠಾಕೂರ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ಬಹುತೇಕ ಆರೋಗ್ಯ ಕಾರ್ಯರ್ಕರು ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದು, ಸಕಾಲಕ್ಕೆ ವೇತನ ಪಡೆಯುತ್ತಿಲ್ಲ ಎನ್ನಲಾಗಿದೆ. ರೋಗಿಗಳ ಸಂಬಂಧಿಕರಿಂದ ಆಸ್ಪತ್ರೆ ಸಿಬ್ಬಂದಿ ಹಣ ಕೀಳುತ್ತಿರುವ ಹಲವು ನಿದರ್ಶನಗಳು ವರದಿಯಾಗುತ್ತಿವೆ. ಈ ಘಟನೆಯ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಆಸ್ಪತ್ರೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. "ಇದಕ್ಕೆ ಹೊಣೆಯಾದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಇದು ಮಾನವೀಯತೆಗೆ ನಾಚಿಕೆಗೇಡು" ಎಂದು ಸಮಷ್ಟಿಪುರ ಸಿವಿಲ್ ಸರ್ಜನ್ ಡಾ.ಎಸ್.ಕೆ.ಚೌಧರಿ ಹೇಳಿದ್ದಾರೆ.