ಪಾಕಿಸ್ತಾನ ರಾಜಕಾರಣಿ, ಟಿವಿ ನಿರೂಪಕ ಅಮೀರ್ ಲಿಯಾಕತ್ ಅನುಮಾನಾಸ್ಪದ ಸಾವು

Twitter/PTVNewsOfficial
ಕರಾಚಿ: ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ (ಎಂಎನ್ಎ) ಮಾಜಿ ಸದಸ್ಯ ಮತ್ತು ಜನಪ್ರಿಯ ದೂರದರ್ಶನ ನಿರೂಪಕ ಅಮೀರ್ ಲಿಯಾಕತ್ (49) ಅವರು ಕರಾಚಿಯಲ್ಲಿ ನಿಗೂಢ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಗುರುವಾರ ವರದಿ ಮಾಡಿವೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ನಾಯಕರಾಗಿರುವ ಅವರು ಖುದಾದ್ ಕಾಲೋನಿಯಲ್ಲಿರುವ ಅವರ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅನುಮಾನಸ್ಪದ ಸಾವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಶವ ಪರೀಕ್ಷೆ ನಡೆಸಲು ಕುಟುಂಬದವರ ಅನುಮತಿ ಕೋರಿದ್ದಾರೆ.
ಬುಧವಾರ ರಾತ್ರಿ ಅಸ್ವಸ್ಥರಾಗಿದ್ದ ಲಿಯಾಖತ್ , ಆಸ್ಪತ್ರೆಗೆ ಹೋಗಲು ನಿರಾಕರಿಸಿದರು ಎಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮ ಜಿಯೋ ಟಿವಿ ವರದಿ ಮಾಡಿದೆ.
ಗುರುವಾರ ಬೆಳಗ್ಗೆ ಲಿಯಾಖತ್ನ ಕೊಠಡಿಯಿಂದ ಕಿರುಚಾಟ ಕೇಳಿಸಿತು ಎಂದು ಲಿಯಾಖತ್ನ ಕೆಲಸಗಾರ ಜಾವೇದ್ ಹೇಳಿದ್ದಾರೆ. ಕೋಣೆ ಒಳಗಿನಿಂದ ಲಾಕ್ ಆಗಿತ್ತು. ಯಾವುದೇ ಪ್ರತಿಕ್ರಿಯೆ ಬರದಿದ್ದಾಗ, ಅವರ ಮನೆಯ ಸಿಬ್ಬಂದಿ ಅವರ ಕೋಣೆಯ ಬಾಗಿಲನ್ನು ಒಡೆದರು. ಬಳಿಕ ಆಸ್ಪತ್ರೆಗೆ ಕರೆತಂದಾಗ ಲಿಯಾಖತ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪೊಲೀಸರು ಅಮೀರ್ ಲಿಯಾಖತ್ ಸಾವಿನ ತನಿಖೆಯನ್ನು ಪ್ರಾರಂಭಿಸಿದ್ದು, ಕರಾಚಿಯ ಖುದಾದಾದ್ ಕಾಲೋನಿಯಲ್ಲಿರುವ ಅವರ ಮನೆಯಲ್ಲೂ ಪೊಲೀಸರು ಶೋಧ ನಡೆಸಿದ್ದಾರೆ.