ರಶ್ಯದ ದಿಗ್ಬಂಧನ ತೆರವುಗೊಳ್ಳದಿದ್ದರೆ ಲಕ್ಷಾಂತರ ಮಂದಿ ಹಸಿವೆಯಿಂದ ಬಳಲಬಹುದು: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ಕೀವ್ (ಉಕ್ರೇನ್), ಜೂ. 9: ಕಪ್ಪು ಸಮುದ್ರದಲ್ಲಿರುವ ಉಕ್ರೇನ್ ನ ಬಂದರುಗಳಿಗೆ ರಶ್ಯ ಹಾಕಿರುವ ದಿಗ್ಬಂಧನಗಳು ತೆರವುಗೊಳ್ಳದಿದ್ದರೆ ಲಕ್ಷಾಂತರ ಜನರು ಹಸಿವೆಯಿಂದ ಬಳಲಬಹುದು ಎಂದು ಉಕ್ರೇನ್ ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಗುರುವಾರ ಹೇಳಿದ್ದಾರೆ.
‘‘ರಶ್ಯದ ದಿಗ್ಬಂಧನದಿಂದಾಗಿ ಗೋಧಿ, ಜೋಳ, ತೈಲ ಮತ್ತು ಇತರ ಉತ್ಪನ್ನಗಳನ್ನು ಬೃಹತ್ ಪ್ರಮಾಣದಲ್ಲಿ ರಫ್ತು ಮಾಡಲು ಉಕ್ರೇನ್ ಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಜಗತ್ತು ಇಂದು ಭಯಾನಕ ಆಹಾರ ಬಿಕ್ಕಟ್ಟಿನ ಸುಳಿಯಲ್ಲಿ ಸಿಕ್ಕಿಕೊಂಡಿದೆ’’ ಎಂಬುದಾಗಿ ಝೆಲೆನ್‌ಸ್ಕಿ ಟಿವಿಯಲ್ಲಿ ಹೇಳಿಕೆ ನೀಡಿದ್ದಾರೆ.
‘‘ಇದರ ಪರಿಣಾಮವಾಗಿ ಜಗತ್ತಿನಾದ್ಯಂತ ಹತ್ತಾರು ದೇಶಗಳಲ್ಲಿ ಆಹಾರ ಧಾನ್ಯಗಳ ಕೊರತೆ ತಲೆದೋರಬಹುದಾಗಿದೆ. ಕಪ್ಪು ಸಮುದ್ರಕ್ಕೆ ರಶ್ಯ ಹಾಕಿರುವ ಮುತ್ತಿಗೆಯು ಮುಂದುವರಿದರೆ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಹಸಿವೆಯಿಂದ ಬಳಲಬಹುದು’’ ಎಂದು ಅವರು ಹೇಳಿದರು.
ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿದ ಬಳಿಕ, ಸುಮಾರು 15 ವಾರಗಳಲ್ಲಿ ಆ ದೇಶದ ಕರಾವಳಿಯ ಹೆಚ್ಚಿನ ಭಾಗಗಳನ್ನು ರಶ್ಯ ತನ್ನ ವಶಕ್ಕೆ ತೆಗೆದುಕೊಂಡಿದೆ. ಅದರ ಯುದ್ಧನೌಕೆಗಳು ಕಪ್ಪು ಸಮುದ್ರ ಮತ್ತು ಅರೊವ್ ಸಮುದ್ರವನ್ನು ನಿಯಂತ್ರಿಸುತ್ತಿದ್ದು, ಉಕ್ರೇನ್ ನ ಕೃಷಿ ಉತ್ಪನ್ನಗಳ ರಫ್ತಿಗೆ ತಡೆಯಾಗಿದೆ. ಇದರಿಂದಾಗಿ ಜಗತ್ತಿನಾದ್ಯಂತ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದೆ.
ದಿಗ್ಬಂಧನಕ್ಕೆ ರಶ್ಯವನ್ನು ಹೊಣೆ ಮಾಡಿರುವ ಝೆಲೆನ್‌ಸ್ಕಿ, ‘‘ಸ್ವಾತಂತ್ರವನ್ನು ರಕ್ಷಿಸುವ ವಿಧಾನಗಳತ್ತ ನಾವು ನೋಡುತ್ತಿದ್ದರೆ, ಒಬ್ಬ ವ್ಯಕ್ತಿಯು ಅದನ್ನು ಸ್ವಾತಂತ್ರವನ್ನೇ ನಾಶಪಡಿಸುತ್ತಿದ್ದಾನೆ. ಆ ವ್ಯಕ್ತಿಯು ಹಸಿವೆಯ ಮೂಲಕ ಜಗತ್ತನ್ನು ಬ್ಲಾಕ್ಮೇಲ್ ಮಾಡುವುದನ್ನು ಮುಂದುವರಿಸುತ್ತಿದ್ದಾನೆ’’ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರನ್ನು ಉಲ್ಲೇಖಿಸುತ್ತಾ ಹೇಳಿದರು