ಶಾಸಕಿಯ ಮತಪತ್ರ ಕೈಯ್ಯಲ್ಲಿ ಹಿಡಿದ ಚುನಾವಣಾ ವೀಕ್ಷಕ: ರಾಜಸ್ಥಾನದಲ್ಲೊಂದು ವಿವಾದ

ಸಾಂದರ್ಭಿಕ ಚಿತ್ರ (Photo: Twitter)
ಜೈಪುರ್: ರಾಜಸ್ಥಾನದಲ್ಲಿ ಇಂದು ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆ ವೇಳೆ ಬಿಜೆಪಿ ಶಾಸಕಿ ಶೋಭಾ ರಾಣಿ ಕುಶ್ವಾಹ ಅವರು ಮತ ಚಲಾಯಿಸುತ್ತಿರುವಾಗ ಚುನಾವಣಾ ವೀಕ್ಷಕ ರಾಜೇಂದ್ರ ರಾಥೋರ್ ಶಾಸಕಿಯ ಮತಪತ್ರವನ್ನು ನಿಯಮಕ್ಕೆ ವಿರುದ್ಧವಾಗಿ ತಮ್ಮ ಕೈಯ್ಯಲ್ಲಿ ಹಿಡಿದುಕೊಂಡ ಘಟನೆ ನಡೆದಿದ್ದು ಈ ಮತವನ್ನು ಅಸಿಂಧು ಎಂಧು ಘೋಷಿಸಬೇಕು ಎಂದು ಝೀ ಅಧ್ಯಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿ ಸುಭಾಶ್ ಚಂದ್ರ ಅವರು ಆಗ್ರಹಿಸಿದ್ದಾರೆ.
ಕುಶ್ವಾಹ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ತಿವಾರಿ ಅವರಿಗೆ ಅಡ್ಡ ಮತದಾನ ಮಾಡಲಿದ್ದರೆಂದು ಹೇಳಲಾಗಿದೆ.
ಆದರೆ ಬಿಜೆಪಿ ಬೆಂಬಲಿತ ಸುಭಾಶ್ಚಂದ್ರ ಅವರು ರಾಥೋರ್ ಅವರು ಮತಪತ್ರವನ್ನು ಕೈಯ್ಯಲ್ಲಿ ಹಿಡಿದಿದ್ದುದಕ್ಕೆ ಆಕ್ಷೇಪಿಸಿ ಆಕೆಯ ಮತ ಅಸಿಂಧುವೆಂದು ಘೋಷಿಸಿ ಎಂದಾಗ ತಾವು ಹಾಗೇನೂ ಮಾಡಿಲ್ಲ ಎಂದು ರಾಥೋರ್ ಹೇಳಿದರು.
"ನಾನು ಆಕೆಯ ಮತ ನೋಡಿದೆ ಆದರೆ ಮತಪತ್ರ ಕೈಯ್ಯಲ್ಲಿ ಹಿಡಿದಿಲ್ಲ. ನಡೆದಿದ್ದು ಪಕ್ಷದ ಆಂತರಿಕ ವಿಚಾರ. ಪಕ್ಷದ ಸೂಚನೆಯ ವಿರುದ್ಧವಾಗಿ ಆಕೆ ಮತ ಚಲಾಯಿಸಿದ್ದರು,''ಎಂದು ರಾಥೋರ್ ಹೇಳಿದರು.
ಆದರೆ ಶೋಭಾ ಅವರ ಮತದಲ್ಲಿ ಕೆಲವು ನ್ಯೂನತೆಗಳಿದ್ದವು ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪುನಿಯಾ ಹೇಳಿದ್ದಾರೆ.
ಮತದಾನ ವೀಕ್ಷಕರು ಶಾಸಕರ ಮತಪತ್ರಗಳನ್ನು ಕೈಯ್ಯಲ್ಲಿ ಹಿಡಿಯುವಂತಿಲ್ಲ. ಶಾಸಕರು ಮತಗಳನ್ನು ಅವರಿಗೆ ತೋರಿಸಿದ ನಂತರ ಮತಪೆಟ್ಟಿಗೆಯಲ್ಲಿ ಹಾಕುತ್ತಾರೆ.